ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಬಲ ಭೂಕಂಪ

ಸಿಡ್ನಿ: ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಗೆ ಸುನಾಮಿ ಅಲೆಗಳು ಎದ್ದಿವೆ ಎಂದು ಆಸ್ಟ್ರೇಲಿಯಾ ಹೇಳಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.7ರಷ್ಟು ದಾಖಲಾಗಿದೆ. ಆಸ್ಟ್ರೇಲಿಯಾದ ಲಾರ್ಡ್ ಹೋವೆ ದ್ವೀಪಕ್ಕೆ ಸುನಾಮಿ ಅಪ್ಪಳಿಸಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಹೇಳಿದೆ.
ನ್ಯೂ ಕ್ಯಾಲಿಡೊಲಿಯಾದಿಂದ 420 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ. ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದ್ದರಿಂದ ಸುನಾಮಿ ಅಲೆಗಳು ಎದ್ದಿವೆ ಎನ್ನಲಾಗಿದೆ. ಕಡಲ ತೀರಗಳಿಂದ ಸಾಧ್ಯವಾದಷ್ಟು ಬೇಗ ತೆರಳುವಂತೆ ಜನರಿಗೆ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಸೂಚಿಸಿದೆ. ನ್ಯೂಜಿಲ್ಯಾಂಡ್ ಗೂ ಸುನಾಮಿ ಭೀತಿಯಿದ್ದು, ಅಲ್ಲಿಯ ಕಡಲತೀರಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.