ಓಮಿನಿ ಕಾರಿನಲ್ಲಿ ಹೊರನಾಡಿಗೆ ಹೋಗುತ್ತಿದ್ದ ನಾಲ್ವರ ಮೇಲೆ ಒಂಟಿ ಸಲಗ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಂದೂರು ಸಾರಗೋಡು-ಸಮೀಪದ ಭೈರೇಗುಡ್ಡ ಕ್ರಾಸ್ ಬಳಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಜೋಳದಾಳು ಗ್ರಾಮದ ನಾಲ್ವರು ಓಮಿನಿಯಲ್ಲಿ ಹೊರನಾಡಿಗೆ ಹೋಗುವಾಗ ಭೈರೇಗುಡ್ಡ ಕ್ರಾಸ್ ಬಳಿ ಏಕಾಏಕಿ ಕಾರಿಗೆ ಅಡ್ಡ ಬಂದ ಒಂಟಿ ಸಲಾಗ ಕಾರಿನ ಮೇಲೆ ದಾಳಿ ಮಾಡಿದೆ. ಕಾರಿನಲ್ಲಿದ್ದ ನಾಲ್ವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದರೆ ಮೂವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆ ಕಾರಿನಲ್ಲಿದ್ದವರು ಕಾರಿನಿಂದ ಇಳಿದು ಓಡಿ ಹೋಗಿದ್ದಾರೆ. ಬಳಿಕ ಒಂಟಿ ಸಕಲ ಓಮಿನಿ ಕಾರಿನ ಮೇಲೆ ಮನಸ್ಸೋ ಇಚ್ಛೆ ದಾಳಿ ಮಾಡಿದ್ದು, ಓಮಿನಿ ಬಹುತೇಕ ಜಖಂಗೊಂಡಿದೆ.
ಗಾಯಾಳುಗಳನ್ನ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಲೆನಾಡಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು. ಈಗಾಗಲೇ ಕಳೆದ ಎರಡ್ಮೂರು ವರ್ಷದಿಂದ ಮಲೆನಾಡು ಭಾಗದಲ್ಲಿ ಆನೆ ಹಾವಳಿಯಿಂದ ಮೂರ್ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಕಳೆದೊಂದು ವರ್ಷದಿಂದ ಮಲೆನಾಡ ಹೊಲ-ಗದ್ದೆ, ತೋಟಗಳಲ್ಲಿ ದಾಳಿ ಮಾಡುತ್ತಿದ್ದ ಕಾಡಾನೆಗಳು ಈಗ ವಾಹನ ಹಾಗೂ ಜನಸಾಮಾನ್ಯರ ಮೇಲೂ ದಾಳಿ ಮಾಡಲು ಮುಂದಾಗಿವೆ. ಇದರಿಂದ ಮಲೆನಾಡಿಗರಲ್ಲಿ ಆತಂಕ ಮನೆಮಾಡಿದೆ.