ಕನ್ನಡಿಗ ಕೆ.ಎಲ್. ರಾಹುಲ್ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಶತಕ ಸಿಡಿಸಿ ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿದಿದ್ದಾರೆ.
ಕೆ.ಎಲ್. ರಾಹುಲ್ 212 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು. ಅಲ್ಲದೇ ದಿನದಾಂತ್ಯಕ್ಕೆ 242 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 124 ರನ್ ಬಾರಿಸಿ ಔಟಾಗದೇ ಉಳಿದರು. ರಾಹುಲ್ ಪಾಲಿಗೆ ಇದು 6ನೇ ಟೆಸ್ಟ್ ಶತಕವಾಗಿದೆ. ಅಲ್ಲದೇ ಆರಂಭಿಕನಾಗಿ 4ನೇ ಶತಕವಾಗಿದೆ.
ಇದೇ ವೇಳೆ ರಾಹುಲ್ ಆರಂಭಕನಾಗಿ ಏಷ್ಯಾದ ಹೊರಗೆ 4 ಶತಕ ಸಿಡಿಸಿದ ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದರು. ರಾಹುಲ್ ಈ ಸಾಧನೆಗಾಗಿ 28 ಇನಿಂಗ್ಸ್ ಪಡೆದರೆ, ಸೆಹ್ವಾಗ್ 4 ಶತಕ ಬಾರಿಸಲು 69 ಇನಿಂಗ್ಸ್ ಪಡೆದಿದ್ದರು. ಸುನೀಲ್ ಗವಾಸ್ಕರ್ 81 ಇನಿಂಗ್ಸ್ ಗಳಲ್ಲಿ 15 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ರಾಹುಲ್ ಏಷ್ಯಾದ ಹೊರಗೆ ಟೆಸ್ಟ್ ಪಂದ್ಯದ ಮೊದಲ ದಿನವೇ ಶತಕ ಸಿಡಿಸಿದ ಸೆಹ್ವಾಗ್ ನಂತರ ಎರಡನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ನವಜ್ಯೋತ್ ಸಿಂಗ್ ಸಿದು 1989ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 116 ರನ್ ಗಳಿಸಿದ್ದರು.