ಸಿಸಿಬಿ ಇನ್ ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಜಮೀನು ವಿವಾದ ಬಗೆಹರಿಸಿಕೊಡುವುದಾಗಿ ನಂಬಿಸಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ 10.75 ಲಕ್ಷ ರೂ. ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೆಪಿ ನಗರದ ರಿಯಲ್ ಎಸ್ಟೇಟ್ ಉದ್ಯಮಿಗೆ ವಂಚಿಸಿದ ವೆಂಕಟೇಶ್ ಎಂಬಾತನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ನಾನು ಸಿಸಿಬಿ ಇನ್ಸ್‌ಪೆಕ್ಟರ್ ವೆಂಕಟೇಶ್ ಎಂದು ಪರಿಚಯಿಸಿಕೊಂಡ ವೆಂಕಟೇಶ್, ನಿಮ್ಮ ಜಮೀನು ಕೇಸ್ ವಿಚಾರಣೆ ಮಾಡುತ್ತಿದ್ದೇನೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಬಳಿ ಪರಿಚಯಿಸಿಕೊಂಡಿದ್ದ. ಅಲ್ಲದೇ ಉದ್ಯಮಿಗೆ ಸೇರಿದ 11 ಎಕರೆ ಜಮೀನು ವ್ಯಾಜ್ಯ ಬಗೆಹರಿಸಲು 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ.
ಇನ್ಸ್‌ಪೆಕ್ಟರ್ ಎಂದು ಪೊಲೀಸ್ ಹ್ಯಾಂಡ್ ಕಾಪ್ ತೋರಿಸಿದ್ದ ವೆಂಕಟೇಶ್ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಇಷ್ಟು ದೊಡ್ಡ ಮೊತ್ತ ನೀಡಲು ಆಗಲ್ಲ ಎಂದಾಗ ಕೊನೆಗೆ 10 ಲಕ್ಷಕ್ಕೆ ಡೀಲ್ ಕುದುರಿಸಿ, ಉದ್ಯಮಿಯಿಂದ 10.75 ಲಕ್ಷ ಪಡೆದಿದ್ದ.
ಹಣ ಪಡೆದು ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡಿದ್ದ ವೆಂಕಟೇಶ್ ಬಗ್ಗೆ ಅನುಮಾನಗೊಂಡ ಉದ್ಯಮಿ ಚಾಮರಾಜಪೇಟೆ ಸಿಸಿಬಿ ಕಚೇರಿಗೆ ತೆರಳಿ ಇನ್ಸ್‌ಪೆಕ್ಟರ್ ಬಗ್ಗೆ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ.
ಉದ್ಯಮಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿಸಿಬಿ ಇನ್ಸ್‌ಪೆಕ್ಟರ್ ಹೆಸರಲ್ಲಿ ಡೀಲ್ ಮಾಡಿದ್ದ ವೆಂಕಟೇಶ್ ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.