ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ನಿರಂತರ ಮಳೆಯಿಂದ ಚಾರ್ಮಾಡಿ ಘಾಟಿಯ ಫಾಲ್ಸ್‍ಗಳಿಗೆ ಜೀವಕಳೆ ಬಂದಿದೆ.
ಹಾವು ಬಳುಕಿನ ಮೈಕಟ್ಟಿನ ಚಾರ್ಮಾಡಿ ರಸ್ತೆಯಲ್ಲಿ ಮುಗಿಲೆತ್ತರದ ಬೆಟ್ಟ-ಗುಡ್ಡಗಳಿವೆ. ನೂರಾರು ಮಿನಿ ಫಾಲ್ಸ್‍ಗಳಿವೆ. ಈ 22 ಕಿ.ಮೀ. ಘಾಟಿಯ ರಸ್ತೆಯ ಇಕ್ಕೆಲಗಳಲ್ಲಿ ಹತ್ತಾರು ಜಲಪಾತಗಳು ನಿರಂತರವಾಗಿ ಹರಿಯುತ್ತಿವೆ.
ಮತ್ತಲವು ಜಲಪಾತಗಳು ಮಳೆಗಾಲದಲ್ಲಿ ಜನ್ಮ ಪಡೆದು ಮಳೆಗಾಲ ಮುಗಿಯುತ್ತಿದ್ದಂತೆ ಕರಗುತ್ತವೆ. ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದೆ. ಕಳೆದ ರಾತ್ರಿಯಿಂದ ನಿರಂತವಾಗಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದ ಚಾರ್ಮಾಡಿಯಲ್ಲಿನ ನೂರಾರು ಫಾಲ್ಸ್‍ಗಳಲ್ಲಿ ಪ್ರಕೃತಿ ಸೌಂದರ್ಯ ಮೇಳೈಸಿದೆ.
ಚಾರ್ಮಾಡಿ ಘಾಟಿ ಆರಂಭವಾಗುತ್ತಿದ್ದಂತೆ ಪ್ರವಾಸಿಗರು, ಪ್ರಯಾಣಿಕರನ್ನ ಸ್ವಾಗತಿಸುವ ಜಲಪಾತವಿಂದು ಮೈದುಂಬಿ ಹರಿಯುತ್ತಿದೆ. ನೀರಿನ ವೇಗದ ಶಬ್ಧವೇ ಮನಸ್ಸಿಗೆ ಮುದ ನೀಡುತ್ತಿದೆ. ಚಾರ್ಮಾಡಿಯ 22 ಕಿ.ಮೀ. ಘಾಟಿಯ ರಸ್ತೆಯಲ್ಲಿ ಇಂತಹವು ಹಲವು ಜಲಪಾತಗಳಿದ್ದರೂ ನೋಡುಗರನ್ನ ಸೂಜಿಗಲ್ಲಿನಂತೆ ಸೆಳೆಯುವ ಕೆಲವು ತಾಣಗಳು ನೋಡುಗರನ್ನ ಮಂತ್ರಮುಗ್ಧರನ್ನಾಗಿಸುತ್ತದೆ.
ಪ್ರವಾಸಿಗರು ಅಲ್ಲಿ ನಿಂತು ಬಂಡೆ ಮೇಲೆ ಹಾಲ್ನೋರೆಯಂತೆ ಧುಮ್ಮಿಕ್ಕುವ ಜಲಪಾತದ ಸೊಬಗನ್ನ ನೋಡಿಯೇ ಮುಂದೆ ಸಾಗೋದು. ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ನೋಡುಗರನ್ನ ಕೈಬೀಸಿ ಕರೆಯುತ್ತಿದೆ.