ಭೋಪಾಲ್: ಮಧ್ಯಪ್ರದೇಶದ ರೈತ ಮಹಿಳೆಯೊಬ್ಬಳು ತನಗೆ ಹೊಲಕ್ಕೆ ಹೋಗಲು ಹೆಲಿಕಾಪ್ಟರ್ ಕೊಡಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ನನಗೆ ಹೊಲಕ್ಕೆ ತೆರಳಲು ಹೆಲಿಕಾಪ್ಟರ್ ಕೊಡಿಸಿ ಅಥವಾ ಹೆಲಿಕಾಪ್ಟರ್ ಕೊಳ್ಳಲು ಸಾಲವನ್ನಾದರೂ ಕೊಡಿಸಿ ಎಂದು ಅಗರ್ ಗ್ರಾಮದ ರೈತಮಹಿಳೆ ಬಸಂತಿ ಬಾಯಿ ಪತ್ರ ಬರೆದಿದ್ದಾರೆ.
ಮನೆಯಿಂದ ಸ್ವಲ್ಪ ದೂರದಲ್ಲಿಯೇ ನನ್ನ ಹೊಲವಿದೆ. ಈ ಹೊಲವೇ ನನ್ನ ಆದಾಯದ ಮೂಲ. ಆದರೆ ವ್ಯಕ್ತಿಯೊಬ್ಬ ತನ್ನ ಮಕ್ಕಳೊಂದಿಗೆ ಸೇರಿಕೊಂಡು ನಾನು ಹೊಲಕ್ಕೆ ಹೋಗುವ ದಾರಿಯನ್ನು ಮುಚ್ಚಿದ್ದಾನೆ. ಅಲ್ಲದೇ, ನಾನು ಯಾವುದೇ ದಾರಿ ಬಳಸಿಕೊಂಡು ನನ್ನ ಹೊಲ ತಲುಪದಂತೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಾನು ಸ್ಥಳೀಯ ಆಡಳಿತಗಳಿಗೆ ದೂರು ನೀಡಿದೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ನನ್ನ ಹೊಲಕ್ಕೆ ತೆರಳಲು ಅನುಕೂಲವಾಗುವಂತೆ ಮತ್ತು ಕೃಷಿ ಉಪಕರಣಗಳನ್ನು ತ್ವರಿತವಾಗಿ ಸಾಗಿಸಲು ಅನುಕೂಲವಾಗುವಂತೆ ಹೆಲಿಕಾಪ್ಟರ್ ಗೆ ಬೇಡಿಕೆ ಇಟ್ಟಿದ್ದೇನೆಂದು ರೈತಮಹಿಳೆ ಪತ್ರದಲ್ಲಿ ಬರೆದಿದ್ದಾರೆ.
ಸದ್ಯ ಈ ಪತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಕಂದಾಯ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕ ಇಲ್ಲಿಗೆ ಭೇಟಿನೀಡಿ ಪರಿಶೀಲಿಸಿದ್ದಾರೆ. ರೈತಮಹಿಳೆಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.