ಮಗನನ್ನೇ ಕತ್ತಿಯಿಂದ ಕೊಚ್ಚಿ ಕೊಂದ ಅಪ್ಪ ತಾನೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೂಂಜಾಲಕಟ್ಟೆಯಲ್ಲಿ ನಡೆದಿದೆ.
ಪುಂಜಾಲಕಟ್ಟೆ ಸರ್ಕಾರಿ ಆಸ್ಪತ್ರೆಯ ಸಮೀಪ ಭಜನಾ ಮಂದಿರದ ಬಳಿ ನಿವಾಸಿ ಬಾಬು ನಾಯ್ಕ ( 58) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆರೋಪಿ ತಂದೆ. ಸಾತ್ವಿಕ್ ( 15) ಕೊಲೆಯಾದ ಬಾಲಕ.
ಕುಡಿತದ ಚಟ ಹೊಂದಿದ್ದ ಬಾಬು ನಾಯ್ಕ್ ಕೆಲ ದಿನಗಳಿಂದ ಮನೆಯಲ್ಲಿ ಮಗನೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡುತ್ತಿದ್ದ. ಬುಧವಾರ ಬಾಬು ನಾಯ್ಕ್ ಪತ್ನಿ ಗೇರುಬೀಜದ ಫ್ಯಾಕ್ಟರಿಯ ಕೆಲಸಕ್ಕೆ ತೆರಳಿದ್ದ ವೇಳೆ ಮಧ್ಯಾಹ್ನ ಮತ್ತೆ ಮಗನ ಜೊತೆ ಗಲಾಟೆ ಮಾಡಿದ್ದಾನೆ. ಗಲಾಟೆಯ ವೇಳೆ ಮಗ ಸಾತ್ವಿಕ್ನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ಬಾಬು ನಾಯ್ಕ್ ಬಳಿಕ ಮನೆಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ವಿವರಿಸಿದ್ದಾರೆ.
ಸುದ್ದಿ ತಿಳಿದು ಜಿ.ಪಂ ಸದಸ್ಯ ಎಂ.ತುಂಗಪ್ಪ ಬಂಗೇರ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮದ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪುಂಜಾಲಕಟ್ಟೆ ಎಸ್ಐ ಸೌಮ್ಯ ಸ್ಥಳದಲ್ಲಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.