ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜೀತ್ ಲಂಕೇಶ್ ಆರೋಪಿಸಿದಂತೆ ಮೈಸೂರಿನ ನಮ್ಮ ಹೋಟೆಲ್ ನಲ್ಲಿ ಗಲಾಟೆ ಆಗಿದ್ದು ನಿಜ. ದರ್ಶನ್ ನಮ್ಮ ನೌಕರನ ಮೇಲೆ ಬೈದಿದ್ದು ನಿಜ. ಆದರೆ ಹಲ್ಲೆ ಮಾಡಿಲ್ಲ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಪುತ್ರ ಸಂದೇಶ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದ್ರಜೀತ್ ಲಂಕೇಶ್ 15 ದಿನಗಳ ಹಿಂದೆ ಕರೆ ಮಾಡಿ ಮಾಹಿತಿ ಕೇಳಿದ್ದರು. ಘಟನೆ ಆಗಿದ್ದು ನಿಜ. ಆದರೆ ಹಲ್ಲೆ ಮಾಡಿಲ್ಲ. ಬೈದಿದ್ದು ನಿಜ. ಈ ವಿಷಯ ಇಲ್ಲಿಗೆ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದೆ ಎಂದರು.
ದರ್ಶನ್ ಜೊತೆಗೆ ಸಂಬಂಧ ಈಗಲೂ ಚೆನ್ನಾಗಿಯೆ ಇದೆ. ಮುಂದೆಯೂ ಸಂಬಂಧ ಚೆನ್ನಾಗಿಯೇ ಇರುತ್ತದೆ. ಅವತ್ತು ಘಟನೆ ನಡೆದ ಬಳಿಕ ದರ್ಶನ್ ಗೆ ನಾನೇ ಬೈದಿದ್ದೇನೆ. ದರ್ಶನ್ ತನ್ನದೇ ಹೋಟೆಲ್ ಅಂತ ಅಂದುಕೊಳ್ಳುವಷ್ಟು ಆತ್ಮೀಯವಾಗಿದ್ದಾರೆ. ಹಾಗಾಗಿ ಆತ್ಮೀಯತೆಯಿಂದ ಹೀಗೆ ಆಗಿದೆ ಎಂದರು.
ನಮ್ಮ ನೌಕರ ಹಿಂದಿಯವನು. ಕನ್ನಡ ಬರಲ್ಲ. ಸರ್ವಿಸ್ ಮಾಡಬೇಕಾದರೆ ದರ್ಶನ್ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಬೈದಿದ್ದಾನೆ. ನಮಗೆ ಅನ್ನ ಕೊಡುವವರೇ ನೌಕರರು. ಹಾಗಾಗಿ ಆ ನೌಕರನ ಬಳಿ ನಾನು ದರ್ಶನ್ ಪರವಾಗಿ ಕ್ಷಮೆ ಕೇಳಿದ್ದೇನೆ. ಹಲ್ಲೆ ಆಗಿಲ್ಲ. ಈ ಘಟನೆ ಸಿಸಿಟಿವಿ ದೃಶ್ಯ ಕಡಿತ ಮಾಡಿಲ್ಲ. 10 ದಿನ ಮಾತ್ರ ಇರುತ್ತದೆ ಎಂದು ಸಂದೇಶ್ ವಿವರಿಸಿದರು.
ನಮ್ಮದು ಸರ್ವಿಸ್ ಏರಿಯಾ. ಏನಾದರೂ ಸಮಸ್ಯೆ ಆದ್ರೆ ನಾವು ಬೈಸಿಕೊಳ್ಳಲೇಬೇಕು. ಹದಿನೈದು ದಿನಗಳ ಹಿಂದಷ್ಟೇ ಇಂದ್ರಜಿತ್ ಲಂಕೇಶ್ ಘಟನೆ ಬಗ್ಗೆ ಕೇಳಿದ್ದರು. ಇಂದ್ರಜಿತ್ ಲಂಕೇಶ್ ಕೂಡ ನನಗೆ ತುಂಬಾ ಆತ್ಮೀಯರು. ಹಲ್ಲೆಯಾಗಿಲ್ಲ, ಬೈದಿದ್ದು ನಿಜ ಘಟನೆಯನ್ನು ಇಲ್ಲಿಗೆ ಬಿಡಿ ಎಂದಿದ್ದೆ. ಇದರಿಂದ ನಟನ ಇಮೇಜ್ ಗೆ ಕೂಡ ಧಕ್ಕೆ ಆಗುತ್ತದೆ, ಹೋಟೆಲ್ ಹೆಸರು ಕೂಡ ಹಾಳಾಗುತ್ತದೆ ಎಂದಿದ್ದೆ ಎಂದು ಅವರು ಹೇಳಿದರು.