ಸಿಕ್ಸರ್ ಕಿಂಗ್ ಮಾಜಿ ಕ್ರಿಕೆಟಿಗ ಯುವರಾಜ್ ವಿರುದ್ದ ಎಫ್ಐಆರ್…!

ನವದೆಹಲಿ. ಭಾರತದ ಮಾಜಿ ಕ್ರಿಕೆಟಿಗ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ಗೆ ಸಂಕಷ್ಟ ಎದುರಾಗಿದೆ. ಹರಿಯಾಣ ಪೊಲೀಸರು ಯುವಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ. ದಲಿತ ಸಮುದಾದಯ ಬಗ್ಗೆ ಅಗೌರವ ಮಾತುಗಳನ್ನ 2020ರಲ್ಲಿ ಇನ್ಸ್ಟಾಗ್ರಾಂ ಮೂಲಕ ಚರ್ಚೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ) 153, 153A, 295, 505 ಸೆಕ್ಷನ್ ಅಡಿಯಲ್ಲಿ ಹಿಸಾರ್ನ ಹನ್ಸಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಇಷ್ಟೇ ಅಲ್ಲದೆ, ಎಸ್ಸಿ/ಎಸ್ಟಿ ಕಾಯ್ದೆಯ 3(1) (r) ಮತ್ತು 3 (1) (s) ಸೆಕ್ಷನ್ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ. ಹಿಸಾರ್ ಮೂಲದ ವಕೀಲರೊಬ್ಬರು ಯುವರಾಜ್, ಜಾತಿವಾದಿ ಕಾಮೆಂಟ್ ಮಾಡಿದ್ದಾರೆಂದು ದೂರು ನೀಡಿದ 8 ತಿಂಗಳ ಬಳಿಕ ಎಫ್ಐಆರ್ ದಾಖಲಿಸಲಾಗಿದೆ.
ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಜತೆಗಿನ ಇನ್ಸ್ಟಾಗ್ರಾಂ ಲೈವ್ ಚರ್ಚೆಯಲ್ಲಿ ಯುವರಾಜ್ ಜಾತಿವಾದಿ ಕಾಮೆಂಟ್ ಮಾಡಿರುವ ಆರೋಪವಿದೆ. ಉದ್ಧೇಶಪೂರ್ವಕವಲ್ಲದೆ ಒಂದು ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಈ ಹಿಂದೆಯೇ ಯುವಿ ಟ್ವೀಟ್ ಮಾಡಿದ್ದರು. ಯಾವುದೇ ರೀತಿಯ ಅಸಮಾನತೆಯನ್ನು ನಾನು ನಂಬುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತೇನೆ. ಬಣ್ಣ, ಜಾತಿ, ಧರ್ಮ ಅಥವಾ ಲಿಂಗ ಯಾವುದೇ ಇರಲಿ ತಾರತಮ್ಯ ಮಾಡುವುದಿಲ್ಲ. ನಾನು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಘನತೆಯನ್ನು ನಂಬುತ್ತೇನೆ ಮತ್ತು ಗೌರವಿಸುತ್ತೇನೆ ಎಂದು ಹೇಳಿದ್ದಾರೆ .ಅಲ್ಲದೆ, ಕ್ಷಮೆಯನ್ನು ಕೇಳಿರುವ ಯುವಿ, ನಾನೆಂದಿಗೂ ಅಸಮಾನತೆಯನ್ನು ನಂಬುವುದಿಲ್ಲ ತಿಳಿಸಿದ್ದಾರೆ.