ಒಲವರಳಿದ ಆ ದಿನಗಳು..!

ಬೆಂಗಳೂರು: ಹೃದಯದಲ್ಲಿ ಅದೇ ಮೊದಲ ಬಾರಿ ಪ್ರೀತಿಯೆನ್ನುವುದು ಪಿಳಿಪಿಳಿ ಕಣ್ಣುಬಿಟ್ಟ ದಿನಗಳು ಅತಿ ಮಧುರವಾದದ್ದು, ಸದಾ ನೆನಪಿನಲ್ಲುಳಿಯುವಂಥದ್ದು. ಅದು ಒನ್ ಸೈಡೆಡ್ ಲವ್ ಆದರೂ ಅಷ್ಟೇ, ಇಬ್ಬರೂ ಇಷ್ಟಪಟ್ಟ ಪ್ರೀತಿಯಾದರೂ ಅಷ್ಟೇ. ಯಾರೋ ಒಬ್ಬರು ಇದ್ದಕ್ಕಿದ್ದಂತೆ ಇಷ್ಟವಾಗಿ ಆ ಇಷ್ಟ ಪ್ರೀತಿಯಾಗಿ, ಆ ಪ್ರೀತಿಯ ಜೀವದೊಂದಿಗೆ ನಾನು ಬದುಕಿನ್ನುದ್ದಕ್ಕೂ ಇರಬೇಕೆಂಬ ನಿರ್ಧಾರಕ್ಕೆ ಬರುತ್ತೀರಿ. ನಿಮ್ಮೊಳಗೇ ‘ಐ ಆ್ಯಮ್ ಇನ್ ಲವ್ ’ ಎಂದು ಪಿಸುಗುಟ್ಟುತ್ತೀರಲ್ಲ ಅವು ನಿಮ್ಮ ಬದುಕಿನ ಹಸಿರು ನೆಲದಲ್ಲಿ ಒಲವೆನ್ನುವುದು ಸಮೃದ್ಧವಾಗಿ ಅರಳಿಕೊಂಡ ದಿನಗಳು.
ನೀವಿನ್ನೂ ಹದಿನೆಂಟಿಪ್ಪತ್ತರ ವಯಸ್ಸಿನವರಾಗಿರಿ, ಹತ್ತಾರು ವರ್ಷ ಪ್ರೀತಿಸಿ ಮನೆಯವರನ್ನೊಪ್ಪಿಸಿ ವಿವಾಹ ಬಂಧನಕ್ಕೊಳಗಾಗಿರಿ, ಈಗಾಗಲೇ ಮದುವೆಯಾಗಿ ಮಗುವೊಂದರ ಅಪ್ಪ-ಅಮ್ಮನಾಗಿರಿ, ನಾಲ್ಕಾರು ಮೊಮ್ಮಕ್ಕಳನ್ನು ಎತ್ತಿ ಆಡಿಸುವ ಅಜ್ಜ-ಅಜ್ಜಿಯಾಗಿರಿ. ಅಥವಾ ಇಷ್ಟಪಟ್ಟ ಪ್ರೀತಿಯನ್ನು ಯಾವುದೋ ಒಂದು ಕಾರಣಕ್ಕೆ ಕಳೆದುಕೊಂಡ ವಿರಹಿಯಾಗಿರಿ… ಯಾರೇ ಆಗಿದ್ದರೂ ಈಗೊಂದು ಕ್ಷಣ ಸುಮ್ಮನೆ ಕಣ್ಣು ಮುಚ್ಚಿಕೊಂಡು ನಿಮ್ಮ ಮೊದಲ ಪ್ರೀತಿ ನಿಮ್ಮ ಹೃದಯದಲ್ಲಿ ರೆಕ್ಕೆ ಪಟಪಟಿಸಿದ ಆ ದಿನಗಳನ್ನೊಮ್ಮೆ ಸುಮ್ಮನೆ ನೆನಪಿಸಿಕೊಳ್ಳಿ. ನೀವು ನೋಡಿರದ ಯಾವ ಸಿನಿಮಾ ಸಹ ಇಂಥದ್ದೊಂದು ಫ್ಲ್ಯಾಶ್ಬ್ಯಾಕ್ನ್ನು ನಿಮ್ಮ ಕಣ್ಣೆದುರಿಗೆ ಕಟ್ಟಿಕೊಡುವುದಿಲ್ಲ. ಆ ದಿನಗಳನ್ನು ನೆನೆಸಿಕೊಂಡರೆ ನಿಮಗೆ ಗೊತ್ತಿಲ್ಲದೇ ರೋಮಾಂಚನಗೊಳ್ಳುತ್ತೀರಿ, ಮುಖವರಳಿಸುತ್ತೀರಿ, ಕೆಲವೊಮ್ಮೆ ಕಣ್ಣೀರಾಗಿ ಕೆನ್ನೆ ತೋಯಿಸಿಕೊಳ್ಳುತ್ತೀರಿ.
ಮೊದಲ ಬಾರಿ ಚಿಗುರಿ ಹಸಿರಾದ ಪ್ರೀತಿಯೇ ನಿಮ್ಮ ಬದುಕಿನಲ್ಲಿ ಈವತ್ತಿಗೂ ಕೈಹಿಡಿದು ಹೆಜ್ಜೆ ಹಾಕುತ್ತಿದ್ದರೆ ಅದು ಬೇರೆ ಮಾತು. ಆದರೆ, ಬದುಕಿನ ತಿರುವುಗಳಲ್ಲೆಲ್ಲೋ ನಿಮ್ಮ ಪ್ರೀತಿ ನಿಮ್ಮ ಕೈತಪ್ಪಿ ಕೈತಪ್ಪಿ ನೀವೆಲ್ಲೋ ಕಳೆದು ಹೋಗಿದ್ದರೂ ಸಹ ಒಲವರಳಿದ ಮೊದಲ ದಿನಗಳು ಅತಿಮಧುರ ಎನಿಸುತ್ತವೆ. ನಾನೂ ಕೂಡ ಪ್ರೀತಿಯ ಬಲೆಯಲ್ಲಿ ಬೀಳುತ್ತೇನೆಂಬ ಸಣ್ಣ ಅರಿವೂ ನಮಗಿರುವುದಿಲ್ಲ. ಅಸಲಿಗೆ ಈ ಪ್ರೀತಿ ಎಂಬುದು ನನ್ನ ಬದುಕಿನಲ್ಲೂ ಸಂಭವಿಸುತ್ತದಾ ಎಂಬುದೇ ನಮಗೆ ತಿಳಿದಿರುವುದಿಲ್ಲ. ಹೀಗಿರುವಾಗ ಅದ್ಯಾವುದೋ ಅಂಗಡಿಯ ಮುಂದೆ ಗೆಳತಿಯೊಂದಿಗೆ ಮಾತನಾಡುತ್ತಾ ಕೂದಲು ಸರಿಮಾಡಿಕೊಳ್ಳುವ ಅವಳು ಕಾಣಿಸಿಬಿಡುತ್ತಾಳೆ. ಅಲ್ಲಿಯವರೆಗೂ ಯಾವುದೇ ಹುಡುಗಿಯನ್ನು ನೋಡಿದರೂ ಬಡಿದುಕೊಳ್ಳದ ಹೃದಯ ಜೋರಾಗಿ ಬಡಿದುಕೊಳ್ಳಲಾರಂಭಿಸುತ್ತದೆ. ಮನಸು ಇವಳೇ ನನ್ನವಳು ಎಂದು ಪಿಸುಗುಡುತ್ತದೆ. ಇದುವರೆಗೂ ಗೊತ್ತೇ ಇಲ್ಲದ ಹುಡುಗಿಯೊಬ್ಬಳು ತುಂಬಾ ಇಷ್ಟವಾಗಿಬಿಡುತ್ತಾಳೆ, ಅವಳೇ ನನ್ನವಳೆನಿಸಿರುತ್ತಾಳೆ. ಇಂಥದ್ದೊಂದು ನಿರ್ಧಾರ ಮಾಡಿದ ಆ ದಿನವನ್ನೊಮ್ಮೆ ನೆನಪಿಸಿಕೊಳ್ಳಿ..! ಅದೆಂತಹ ಮಧುರವಾದ ಯಾತನೆಯಲ್ಲವಾ?
ಅದು ಬದುಕಿನಲ್ಲಿ ಮೊದಲ ಬಾರಿ ಕಾರಂಜಿ ಚಿಮ್ಮಿದ ಕ್ಷಣ. ಎಲ್ಲವೂ ನೆಟ್ಟಗಿದ್ದು ಪ್ರೀತಿಸಿದ ಇಬ್ಬರೂ ಜೊತೆಯಿದ್ದರಂತೂ ಇನ್ನೂ ಅದ್ಭುತವೆನಿಸುವ ಸಂತಸ ನೀಡುತ್ತದೆ. ಆದರೆ ಬದುಕಿನ ಅನಿವಾರ್ಯತೆಗಳಿಗೋ, ಇಷ್ಟ ಪಟ್ಟವರು ಮಾಡಿದ ದ್ರೋಹದಿಂದಲೋ ಇಲ್ಲ ಯಾವುದೋ ಆಸೆಗಳಿಗೆ ಬಿದ್ದು ಮೊದಲ ಪ್ರೀತಿಯನ್ನು ಕಳೆದುಕೊಂಡಿರಬಹುದು. ಹೀಗೀದ್ದಾಗಲೂ ಆ ಮೊದಲ ಪ್ರೀತಿಯರಳಿದ ದಿನಗಳನ್ನು ನೆನೆದರೆ ತಂಗಾಳಿಯೊಂದು ಬೀಸಿ ಹೋದಂತೆ ಭಾಸವಾಗುತ್ತದೆ ಅಲ್ಲವೇ?! ಅದು ಮಧುರತೆಯಲ್ಲಿ ಮಧುರವಾದ ಕ್ಷಣ.. ಅದನ್ನು ಯಾವುದರಿಂದ ಹೇಗೆ ಹಿಡಿದಿಡಲು ಸಾಧ್ಯ?