ಆಹಾರವನ್ನು ಉಚಿತವಾಗಿ ನೀಡಲಿಲ್ಲ ಎಂದು ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿದ್ದೂ ಅಲ್ಲದೇ ಆತನ ಬಳಿ ಇದ್ದ ಹಣವನ್ನೂ ಕಸಿದುಕೊಂಡು ನಾಲ್ವರು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜಾಜಿನಗರದಲ್ಲಿ ಮೇ 28ರಂದು ಈ ಘಟನೆ ನಡೆದಿದ್ದು, ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಡೆಲಿವರಿ ಬಾಯ್ ಕಾರ್ತಿಕ್ ಹರಿಪ್ರಸಾದ್ ಹಲ್ಲೆಗೊಳಗಾದ ವ್ಯಕ್ತಿ.
ಸ್ವಿಗ್ಗಿಯಲ್ಲಿ ನಾಲ್ವರು ಯುವಕರು ಪುಡ್ ಆರ್ಡರ್ ಮಾಡಿದ್ದಾರೆ. ಅದರಲ್ಲಿ ಒಬ್ಬ ಗ್ರಾಹಕ ಆರ್ಡರ್ ಕ್ಯಾನ್ಸಲ್ ಮಾಡಿದ್ದರೂ ಅದು ಕ್ಯಾನ್ಸಲ್ ಆಗಿಲ್ಲ. ಅಷ್ಟರಲ್ಲಿ ಡೆಲಿವರಿ ಬಾಯ್ ಕಾರ್ತಿಕ್ ಪುಡ್ ಸಮೇತ ನಾಲ್ವರು ಇದ್ದ ಸ್ಥಳಕ್ಕೆ ಬಂದಿದ್ದ.
ಆಹಾರ ತೆಗೆದುಕೊಂಡು ಹಣ ನೀಡುವಂತೆ ಕಾರ್ತಿಕ್ ಕೇಳಿದ್ದಾನೆ. ಆದರೆ ಆ ನಾಲ್ವರು ಹಣ ನೀಡಲು ನಿರಾಕರಿಸಿದ್ದು ಉಚಿತವಾಗಿ ನೀಡುವಂತೆ ಕೇಳಿದ್ದಾರೆ. ಇದೇ ವಿಚಾರದಲ್ಲಿ ವಾಗ್ವಾದ ನಡೆದು ನಾಲ್ವರು ಯುವಕರು ಕಾರ್ತಿಕ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಆಹಾರ ಉಚಿತವಾಗಿ ಕೊಡು ಎಂದು ಕೇಳಿ ಹಲ್ಲೆ ಮಾಡಿದ್ದೂ ಅಲ್ಲದೇ ಡೆಲಿವರಿ ಬಾಯ್ ಬಳಿ ಇದ್ದ 1800 ರೂಪಾಯಿಯನ್ನೂ ಕಸಿದುಕೊಂಡು ನಾಲ್ವರು ಪರಾರಿಯಾಗಿದ್ದಾರೆ.
ಪ್ರಜ್ಞೆ ತಪ್ಪಿ ಬಿದ್ದಿದ್ದ ಕಾರ್ತಿಕ್ ನನ್ನು ಸ್ವಿಗ್ಗಿ ಕಂಪನಿಯವರೇ ಗುರುತಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ತಲೆಗೆ ಮೂರು ಹೊಲಿಗೆ ಹಾಕಲಾಗಿದೆ. ರಾಜಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.