ಮನೆಗೆ ನುಗ್ಗಿ ಯುವತಿಗೆ ಬಲವಂತವಾಗಿ ತಾಳಿಕಟ್ಟಿದ್ದ ಪಾಗಲ್ ಪ್ರೇಮಿ ಕಂಬಿ ಹಿಂದೆ…

ಹಾಸನ; ಮದುವೆ ನಿಶ್ಚಿಯವಾಗಿದ್ದ ಯುವತಿಗೆ ಬಲವಂತವಾಗಿ ತಾಳಿ ಕಟ್ಟಿ ಕರೆದೊಯ್ದಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಜ.21 ರಂದು ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿದ್ದ ಯುವತಿ ಮನೆಗೆ ಸ್ನೇಹಿತರೊಂದಿಗೆ ನುಗ್ಗಿದ್ದ ಯುವಕ ಸತೀಶ್ ತಾನು ಯುವತಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಬಲವಂತವಾಗಿ ತಾಳಿ ಕಟ್ಟಿ ಕರೆದೊಯ್ದಿದ್ದ. ನಂತರ ಯುವತಿ ಪೋಷಕರು ಸತೀಶ್ ವಿರುದ್ಧ ಸಕಲೇಶಪುರ ನಗರ ಠಾಣೆ ದೂರು ನೀಡಿದ್ದರು.
ಗೀತಾ ಎಂಬುವವರ ಪುತ್ರಿ ಶಾಲಿನಿ ಹಾಗೂ ಪುತ್ತೂರು ಮೂಲದ ಸುಜಿತ್ ಪೂಜಾರಿಯೊಂದಿಗೆ ಜ.25 ರಂದು ಮದುವೆ ನಿಶ್ವಯವಾಗಿತ್ತು. ಎರಡು ಕುಟುಂಬಗಳು ಮದುವೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರಲ್ಲದೆ ಲಗ್ನಪತ್ರಿಕೆಯನ್ನು ಹಂಚಿದ್ದರು. ಈ ನಡುವೆ ಜ.21 ರಂದು ಸಕಲೇಶಪುರ ತಾಲ್ಲೂಕಿನ ಅರೆಕೆರೆ ಗ್ರಾಮದ ಸತೀಶ್ ಎಂಬಾತ ತನ್ನ ಹದಿನೈದುಕ್ಕು ಹೆಚ್ಚು ಜನ ಸ್ನೇಹಿತರೊಂದಿಗೆ ಶಾಲಿನಿ ಮನೆಗೆ ಎಂಟ್ರಿ ಕೊಟ್ಟಿದ್ದ.
ನಾನು ಶಾಲಿನಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಮನೆಯವರನ್ನು ಹೆದರಿಸಿ ಬಲವಂತವಾಗಿ ಯುವತಿಗೆ ಹಾರ ಹಾಕಿ ಅರಿಶಿನಕೊಂಬು ಕಟ್ಟಿ ಯುವತಿಯನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗಿದ್ದ. ಅಲ್ಲದೇ ತಾಳಿಕಟ್ಟುವ ವಿಡಿಯೋವನ್ನು ಆತನ ಸ್ನೇಹಿತರು ವೈರಲ್ ಮಾಡಿದ್ದರು. ನಂತರ ಯುವತಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಆರಂಭಿಸಿದರು. ಆರಂಭದಲ್ಲಿ ಶಾಲಿನಿ-ಸತೀಸ್ ಪರಸ್ಪರ ಪ್ರೀತಿಸುತ್ತಿದ್ದರು ಎಂಬ ಸುಳ್ಳು ಮಾಹಿತಿ ದೊರೆಕಿತ್ತು.
ಇದೀಗ ಪೋಲಿಸರು ಇಬ್ಬರನ್ನು ಕರೆದುಕೊಂಡು ಬಂದಿದ್ದಾರೆ. ನನ್ನನ್ನು ಹೆದರಿಸಿ ಬಲವಂತವಾಗಿ ಸತೀಶ್ ತಾಳಿ ಕಟ್ಟಿದ್ದಾನೆ ಎಂದು ಯುವತಿ ಹೇಳಿಕೆ ನೀಡಿದ್ದು ಈ ಸಂಬಂಧ ಸತೀಶ್ ನನ್ನು ಬಂಧಿಸಲಾಗಿದೆ. ಉಳಿದವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ನನ್ನ ತಂಗಿ ಮನೆಗೆ ಮರಳಿದ್ದಾಳೆ. ಆಕೆಗೆ ಬಲವಂತವಾಗಿ ತಾಳಿ ಕಟ್ಟಿ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಲ್ಲದೆ ಕೊಲೆ ಬೆದರಿಕೆ ಹಾಕಿ, ನಿಮ್ಮ ಮನೆಯವರನ್ನು ಸುಮ್ಮನೆ ಬಿಡಲ್ಲ ಎಂದು ಹೆದರಿಸಿರುವ ಬಗ್ಗೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಪೊಲೀಸರು ಸತೀಶ್ ನನ್ನು ಮಾತ್ರ ಬಂಧಿಸಿದ್ದಾರೆ. ಉಳಿದವರನ್ನು ಅರೆಸ್ಟ್ ಮಾಡಿಲ್ಲ. ಎಲ್ಲಾ ಅಂದುಕೊಂಡಂತ್ತೆ ಆಗಿದ್ದರೆ ಅವಳ ಮದುವೆ ಮುಗಿದು ಗಂಡನ ಮನೆ ಸೇರುತ್ತಿದ್ದಳು ಈಗ ನನ್ನ ತಂಗಿ ಜೀವನ ಹಾಳಾಗಿದೆ. ಕೆಲವರು ನನಗೆ ಫೋನ್ ಮಾಡಿ ನೀನು ದುಡ್ಡಿಗೆ ಡಿಮ್ಯಾಂಡ್ ಮಾಡುತ್ತಿದ್ದೀಯಾ ಎಂದು ಕಿರುಕುಳ ನೀಡುತ್ತಿದ್ದಾರೆ. ಯಾವ ಹೆಣ್ಣುಮಕ್ಕಳಿಗೂ ಈ ರೀತಿ ಆಗಬಾರದು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಯುವತಿಯ ಸಹೋದರ ಒತ್ತಾಯಿಸಿದ್ದಾನೆ.