ತುಮಕೂರು : ಒಬ್ಬ ರಾಜಕಾರಣಿ ಆದವರು ಮೊದಲು ಮಾತನಾಡುವುದನ್ನ ಕಲಿಯಬೇಕು. ಜಮೀರ್ ರಾಜಕೀಯವಾಗಿ ಬೆಳೆಯುವುದಕ್ಕೆ ನಮ್ಮ ಕುಮಾರಣ್ಣ ಕಾರಣ. ಅವೆಲ್ಲವನ್ನ ಮರೆತು, ಇವತ್ತು ಬಾಯಿಗೆ ಬಂದ ಹಾಗೆ ಮಾತನಾಡುತ್ತ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿರುವುದನ್ನು ಮರೆತು ಜಮೀರ್ ಮಾತನಾಡಿದ್ದಾರೆ. ಜಮೀರ್ ಮಾತನ್ನ ನೋಡಿದರೆ ಅವರ ಸಂಸ್ಕೃತಿ ಎಂತಹದು ಎಂಬುದು ತಿಳಿಯುತ್ತದೆ ಎಂದು ಕಿಡಿಕಾರಿದರು.
ಜಮೀರ್ ತಮ್ಮ ವಸ್ತುವನ್ನ ವಾಪಾಸ್ ಕೇಳಿದ್ದಾರೆ. ಅವನ್ನ ಖುಷಿಯಿಂದ ವಾಪಸ್ ಮಾಡುತ್ತೇನೆ. ಮನುಷ್ಯ ಮನುಷ್ಯನಿಗೆ ಬೆಲೆ ಕೊಡುವುದನ್ನ ಮೊದಲು ಕಲಿಯಬೇಕು. ನಿನ್ನೆ ಜಮೀರ್ ಮಾಧ್ಯಮಗಳಲ್ಲಿ ಮಾತನಾಡಿದ್ದನ್ನ ಸೂಕ್ಷ್ಮವಾಗಿ ಗಮನಿಸಿದ್ದೇನೆ. ನಮ್ಮ ನಾಯಕರು ಆ ಮನೆಗೆ ಕಾಲಿಟ್ಟು ಏಳೆಂಟು ವರ್ಷಗಳೆ ಕಳೆದಿದೆ. ಮೇಖ್ರಿ ಸರ್ಕಲ್‌ನ ಮನೆಯನ್ನ ಗೆಸ್ಟ್ ಹೌಸ್ತರ ಉಪಯೋಗಿಸಿದ್ದರು. ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಮನೆಯನ್ನ ಕ್ಲಿಯರ್ ಮಾಡಿಕೊಡಿ ಎಂದು ಹೇಳಿದರು.
ಶೂಟಿಂಗ್‌ಗೆ ಸಂಬಂಧಿಸಿದ ವಸ್ತುಗಳು ಮನೆಯಲ್ಲಿದ್ದವು. ನನ್ನ ಹುಡುಗರು ಕೂಡ ಲಾಕ್ ಡೌನ್ ಕಾರಣ ಊರಿಗೆ ಹೋಗಿದ್ದರು. ಬೇಗ ಖಾಲಿ ಮಾಡಲಾಗಲಿಲ್ಲ. ಅಷ್ಟೊತ್ತಿಗೆ ಬೀಗ ಹಾಕಲಾಗಿತ್ತು. ಬೀಗ ಹೊಡೆದು ನೋಡಿದಾಗ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ವು. ಅವರು ದೊಡ್ಡವರಿದ್ದಾರೆ. ಅವರು ಈ ರೀತಿ ನಡೆದುಕೊಳ್ಳಬಾರದಿತ್ತು ಎಂದರು.