ಕೋವಿಡ್ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತುಕತೆ ನಡೆಸಿದ್ದು, ಜುಲೈ 5ರಿಂದ ಮತ್ತಷ್ಟು ಅನ್ ಲಾಕ್ ವೇಳೆ ವಿನಾಯಿತಿ ಘೋಷಿಸುವ ಕುರಿತು ಸಲಹೆ ಪಡೆದಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜುಲೈ 2ರಂದು ಸಚಿವರೊಂದಿಗೆ ಚರ್ಚಿಸಿದ ನಂತರ ಯಾವೆಲ್ಲಾ ಕ್ಷೇತ್ರಗಳಿಗೆ ವಿನಾಯಿತಿ ನೀಡಬೇಕು ಹಾಗೂ ಈಗ ನೀಡಿರುವ ವಿನಾಯಿತಿಯನ್ನು ಯಾವುದಕ್ಕೆ ಹೆಚ್ಚಿಸಬೇಕು ಎಂಬ ಬಗ್ಗೆ ಸಲಹೆ ಪಡೆದು ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.
ಕೋವಿಡ್ ಸೋಂಕು ಪ್ರಮಾಣ ಇಳಿಕೆಯಾಗುತ್ತಿರುವುದು ಒಂದು ಕಡೆಯಾದರೆ, ಮೂರನೇ ಅಲೆಯ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 3ನೇ ಹಂತದ ಅನ್ ಲಾಕ್ ಜಾರಿ ಕುರಿತು ಸಚಿವರ ಸಲಹೆ ಪಡೆದಿದ್ದಾರೆ.
3ನೇ ಹಂತದ ಅನ್ ಲಾಕ್ ವೇಳೆ ಮಾಲ್ ಹಾಗೂ ದೇವಸ್ಥಾನಗಳಿಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ. ಮಾಲ್ ಗಳಿಗೆ ವಿನಾಯಿತಿ ನೀಡಿದರೆ 100ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಮಾಸ್ಕ್ ಕಡ್ಡಾಯ ಮುಂತಾದ ವಿಶೇಷ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ.
ದೇವಸ್ಥಾನಗಳಿಗೆ ವಿನಾಯಿತಿ ನೀಡಿದರೆ ಮೊದಲ ಹಂತದಲ್ಲಿ ಕೇವಲ ಭಕ್ತರ ದರ್ಶನಕ್ಕೆ ಅವಕಾಶ, ಅಭಿಷೇಕ, ರಥೋತ್ಸವ ಹಾಗೂ ಅನ್ನದಾನಕ್ಕೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಇದೇ ವೇಳೆ ಸಂಚಾರಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಸಂಪೂರ್ಣ ತೆರವುಗೊಳಿಸುವ ಸಾಧ್ಯತೆ ಇದೆ.
ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜುಲೈ ಮೊದಲ ವಾರದಲ್ಲಿ ಕೈಬಿಡಲು ನಿರ್ಧಾರ ಕೈಗೊಳ್ಳಲಿದ್ದು, ವಿನಾಯಿತಿ ಕೊಟ್ಟ ಕ್ಷೇತ್ರಗಳಿಗೆ ಮತಷ್ಟು ರಿಲೀಫ್ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.