ಗಗನಯಾನ-2022: ಕರ್ನಾಟಕದಲ್ಲಿ ಸಿದ್ಧವಾದ ಇಡ್ಲಿ-ಚಟ್ನಿ ಸವಿಯಲಿದ್ದಾರೆ ಗಗನಯಾತ್ರಿಗಳು!

ಮೈಸೂರು: ಇಸ್ರೋದ ಬಹುನಿರೀಕ್ಷಿತ ‘ಗಗನಯಾನ-2022’ ಯೋಜನೆಗೆ ರಾಜ್ಯದಲ್ಲಿ ಆಹಾರ ಸಿದ್ಧಪಡಿಸಲಾಗುತ್ತಿದೆ. ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿ ಎಫ್ ಆರ್ ಎಲ್)ದಲ್ಲಿ ಆಹಾರವನ್ನು ಸಿದ್ಧಪಡಿಸಲಾಗುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಗಗನಯಾನ ಕೈಗೊಳ್ಳುವವರಿಗೆ ಈಗಾಗಲೇ ರಷ್ಯಾದಲ್ಲಿ ತರಬೇತಿ ಆರಂಭವಾಗಿದೆ. ಮೂವರು ಗಗನಯಾತ್ರಿಗಳು 5 ರಿಂದ 7 ದಿನ ಬಾಹ್ಯಾಕಾಶದಲ್ಲಿ ಇರಲಿದ್ದು, ಮುಂದಿನ ವರ್ಷ ಅಗಸ್ಟ್ ನಲ್ಲಿ ಯೋಜನೆ ಕಾರ್ಯಗತಗೊಳ್ಳುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಗಗನಯಾತ್ರಿಗಳ ಬೇಡಿಕೆಗೆ ಅನುಸಾರವಾಗಿ ಆಹಾರವನ್ನು ಸಿದ್ಧಪಡಿಸಲಾಗುತ್ತಿದೆ. ವಿಭಿನ್ನ ಪರಿಸ್ಥಿತಿಯಲ್ಲಿ ಗಗನಯಾತ್ರಿಗಳು ನಿಯಂತ್ರಿತ ಆಹಾರವನ್ನು ಸೇವಿಸಬೇಕು. ಇದಕ್ಕೆ ಪೂರಕವಾಗುವಂಥ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಡಿ ಎಫ್ ಆರ್ ಎಲ್ ಹೇಳಿದೆ.
ಗಗನಯಾತ್ರಿಗಳೊಡನೆ ಒಟ್ಟು 60 ಕಿಲೋ ಆಹಾರ ಮತ್ತು 100 ಲೀ. ನೀರು ಅಂತರಿಕ್ಷಕ್ಕೆ ರವಾನೆಯಾಗಲಿದೆ. ಇದಕ್ಕೆಂದು ವಿಶೇಷ ಕಂಟೇನರ್ ಗಳನ್ನು ಸಿದ್ಧಪಡಿಸಲಾಗುತ್ತಿದೆ. ಇಡ್ಲಿ, ಕಾಯಿ ಚಟ್ನಿ, ಎಗ್ ರೋಲ್ಸ್, ವೆಗ್ ರೋಲ್ಸ್, ವೆಜ್ ಪಲಾವ್, ಹೆಸರುಬೇಳೆ ಹಲ್ವಾ, ಚಿಕನ್ ಬಿರಿಯಾನಿ ಮತ್ತು ಚಿಕನ್ ಕೂರ್ಮಾ, ಟೀ-ಕಾಫಿ ಮತ್ತು ಹಣ್ಣಿನ ರಸದ ಬಾರ್ ಗಳು ಸೇರಿದಂತೆ ಹಲವು ಬಗೆಯ ಆಹಾರ ಸಿದ್ಧಗೊಂಡಿದೆ. ಒಟ್ಟು 20 ವಿಜ್ಞಾನಿಗಳು ಗಗನಯಾತ್ರಿಗಳಿಗೆ ಆಹಾರ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.