ಮಾಂಜಾ ಬಳಸಿ ಗಾಳಿಪಟ ಹಾರಿಸುವುದು ನಿಷೇಧಿಸಲಾಗಿದ್ದರೂ ಅದರ ಬಳಕೆ ಸಂಪೂರ್ಣ ನಿಲ್ಲದ ಕಾರಣ ಗದಗ ನಗರದಲ್ಲಿ ವ್ಯಕ್ತಿಯೊಬ್ಬರ ಕೈ ಬೆರಳು ಕಟ್ ಆಗಿದ್ದು, ಕುತ್ತಿಗೆ ಬಳಿ ಗಾಯವಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ.
ನಗರದ ಟಾಂಕಾಕೂಟದ ರಸ್ತೆಯಲ್ಲೂ ಗಾಳಿಪಟಗಳು ಹರಿದು ರಸ್ತೆ ಮಧ್ಯವೇ ದಾರ ಹರಿದು ಬಿದ್ದಿದ್ದು ಇದನ್ನ ಗಮನಿಸದ ಬೈಕ್ ಸವಾರನೊಬ್ಬ ಸ್ಟೇಷನ್ ಮಾರ್ಗದ ಮೂಲಕ ಬರುತ್ತಿದ್ದಾಗ ಗಾಳಿಪಟದ ದಾರ ಸಿಲುಕಿ ಜೀವನ್ಮರಣದ ನಡುವೆ ಹೋರಾಡುವಂತಾಗಿದೆ.
ಬೈಕ್ ಸವಾರನ ಕೈಗೆ ಏಕಾಏಕಿ ಪಟದ ಮಾಂಜಾ ದಾರ ಸಿಲುಕಿದೆ. ಗಾಜು ಮಿಶ್ರಿತ ಪುಡಿಯಿದ್ದ ಗಾಂಜಾ ದಾರ ಆಗಿದ್ದರಿಂದ ಕೈ ಹರಿದಿದ್ದು, ಕುತ್ತಿಗೆಯ ಭಾಗಕ್ಕೂ ಸುತ್ತಿಕೊಂಡಿದೆ. ಇದರಿಂದ ಪರಿಣಾಮ ಕುತ್ತಿಗೆ ಭಾಗ ಹಾಗೂ ಕೈ ಬೆರಳಿಗೆ ಗಂಭೀರ ಗಾಯವಾಗಿದೆ.
ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಗಾಯಾಳು ವಾಹನ ಸವಾರನ ಕೈ ತೊಳೆದು, ಬಟ್ಟೆ ಸುತ್ತಿ ಪ್ರಾರ್ಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದರು. ಮಾಂಜಾ ದಾರದಿಂದಾಗಿ ಮನುಷ್ಯರಷ್ಟೆ ಅಲ್ಲದೇ ಪ್ರಾಣಿ ಪಕ್ಷಿಗಳೂ ಹಾನಿಗೊಳಗಾಗುತ್ತಿದ್ದು, ಮಾಂಜಾ ಬಳಕೆ ನಿಯಂತ್ರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ.