ಬೆಳ್ಳುಳ್ಳಿಯಲ್ಲಿದೆ ಆರೋಗ್ಯದ ಗುಟ್ಟು..!

ಬೆಂಗಳೂರು: ದಿನನಿತ್ಯ ಬಳಸುವ ಬೆಳ್ಳುಳ್ಳಿಯಲ್ಲಿ ಸಾಕಷ್ಟು ಆರೋಗ್ಯ ಗುಣಗಳಿವೆ. ಬೆಳ್ಳುಳ್ಳಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಲಿದ್ದು, ಆರೋಗ್ಯಕ್ಕೆ ಹಲವಾರು ರೀತಿಯ ಲಾಭವನ್ನು ನೀಡುತ್ತದೆ. ಬೆಳ್ಳುಳ್ಳಿಯಲ್ಲಿ ಹಲವಾರು ಖನಿಜಾಂಶಗಳು, ವಿಟಮಿನ್ ಗಳು, ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸುವ ಗುಣಗಳಿವೆ. ಬೆಳ್ಳುಳ್ಳಿಯನ್ನು ಮನೆಮದ್ದಾಗಿ ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ. ಸಾಮಾನ್ಯ ಶೀತವಾದರೆ ಅದನ್ನು ಹೋಗಲಾಡಿಸಲು ಬೆಳ್ಳುಳ್ಳಿ ಬಳಸುತ್ತಾರೆ. ಇನ್ನು ತ್ವಚೆಯಲ್ಲಿ ಹುಳಕಡ್ಡಿಯಾದರೆ ಬೆಳ್ಳುಳ್ಳಿ ರಸ ಹಚ್ಚಿದರೆ ಮಾಯವಾಗುವುದು. ಪ್ರತಿ ದಿನ ಬೆಳ್ಳುಳ್ಳಿಯ ಒಂದು ಸಣ್ಣ ಎಸಳನ್ನು ಜಗಿಯುವುದರಿಂದ ಪಚನಕ್ರಿಯೆ ಚೆನ್ನಾಗಿ ನಡೆದು ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ, ಇದರಿಂದ ಹಸಿವು ಹೆಚ್ಚುತ್ತದೆ.
ಇನ್ನು, ತೂಕ ಇಳಿಸಲು ಬೆಳ್ಳುಳ್ಳಿ ಉತ್ತಮವಾದ ಪದಾರ್ಥವಾಗಿದೆ. ದೇಹದಲ್ಲಿ ಬೊಜ್ಜು ಆವರಿಸಿಕೊಂಡು, ಅನಾರೋಗ್ಯಕಾರಿ ಆಗಿ ತೂಕ ಬೆಳೆದಿದ್ದರೆ ಆಗ ಅದನ್ನು ಇಳಿಸಲು ಹಸಿ ಬೆಳ್ಳುಳ್ಳಿ ಸೇವಿಸಿ. ಹಸಿ ಬೆಳ್ಳಿಯಲ್ಲಿ ಕೆಟ್ಟ ಮತ್ತು ಅಧಿಕ ಕೊಬ್ಬನ್ನು ಕರಗಿಸುವಂತಹ ಅಂಶಗಳು ಇವೆ. ಇನ್ನು, ಬೆಳ್ಳುಳ್ಳಿಯನ್ನು ತಿನ್ನುವುದರಿಂದ ರಕ್ತಸಂಚಾರ ಸರಾಗವಾಗಿ ನಡೆಯುವುದು, ಇದರಿಂದ ಹೃದಯದ ಆರೋಗ್ಯ ಹೆಚ್ಚುವುದು. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಮತ್ತು ತಗ್ಗಿಸುವುದು. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬೆಳ್ಳುಳ್ಳಿ ತುಂಬಾ ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ಸೇವಿಸಿದರೆ ಆಗ ಅದು ನೈಸರ್ಗಿಕವಾಗಿ ಮನಸ್ಥಿತಿ ಸುಧಾರಣೆ ಮಾಡುವುದು.
ಬೆಳ್ಳುಳ್ಳಿ ಹೃದಯಕ್ಕೆ ಚಿಕಿತ್ಸೆ ನೀಡಲು ಅತ್ಯಂತ ಪರಿಣಾಮಕಾರಿ ಮನೆ ಮದ್ದಾಗಿದೆ. ಬೆಳ್ಳುಳ್ಳಿಯಲ್ಲಿ ಗಾಮಾ-ಗ್ಲುಮಿಲ್ಸಿಸ್ಟೈನ್ ಎಂಬ ರಾಸಾಯನಿಕವಿದೆ. ಇದು ಹೃದಯದ ಅಪಧಮನಿಗಳಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ತೆಗೆದುಹಾಕುತ್ತದೆ. ಇದು ಹೃದಯದ ರಕ್ತನಾಳಗಳನ್ನು ತೆರೆಯುತ್ತದೆ ಮತ್ತು ಹೃದಯ ಬ್ಲಾಕ್ ಅನ್ನು ತಡೆಯುತ್ತದೆ.