ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂತಲೇ ಖ್ಯಾತಿಪಡೆದಿರುವ ಕೊಪ್ಪಳದ ಗವಿಮಠ ಜಾತ್ರೆಗೆ ಚಾಲನೆ ಸಿಕ್ಕಿದೆ. ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಗವಿಮಠದ ಶ್ರೀ ಗವಿಸಿದ್ದೇಶ್ವರ ಶ್ರೀಗಳು, ಭಕ್ತರ ಆರೋಗ್ಯಕ್ಕಿಂತ ದೊಡ್ಡ ಜಾತ್ರೆ ಬೇರೊಂದಿಲ್ಲ. ಜಾತ್ರೆ ನಡೆಸುವವನು ನಾನಲ್ಲ. ಇದು ಭಕ್ತರ ಮತ್ತು ದೈವೀಶಕ್ತಿಯ ಸಂಭ್ರಮ. ಗವಿಸಿದ್ದೇಶ್ವರರ ಪ್ರೇರಣೆಯಿದ್ದಂತೆ ಆಗುತ್ತದೆ. ಪ್ರತಿ ವರ್ಷ ಜಾತ್ರೆ ನೋಡಲು ಭಕ್ತರು ಮಠಕ್ಕೆ ಬರುತ್ತಿದ್ದರು. ಈ ಬಾರಿ ಭಕ್ತರಿದ್ದಲ್ಲಿಗೇ ಗವಿಸಿದ್ದೇಶ್ವರ ಹೋಗಿದ್ದಾರೆ ಎಂದಿದ್ದಾರೆ.
ಇಂದು ಬೆಳಗ್ಗೆ 8ಗಂಟೆಗೆ ರಥೋತ್ಸವದ ಮೂಲಕ ಜಾತ್ರೆಗೆ ಚಾಲನೆ ಸಿಕ್ಕಿತು. ಕೊರೋನಾ ಹರಡುವಿಕೆಯ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ರಥೋತ್ಸವದ ಸಮಯವನ್ನು ಹಿಂದಿನ ದಿನವಷ್ಟೇ ಭಕ್ತರಿಗೆ ತಿಳಿಸಲಾಗಿತ್ತು. ಆದರೂ ಸಹ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಜಾತ್ರೆಗೆ ಬರಬೇಡಿ ಎಂದು ಹೇಳಿದ್ದರೂ ಇಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದೀರಿ. ನಿಮ್ಮ ಪ್ರೀತಿ ಮತ್ತು ಭಕ್ತಿ ಎಂದಿಗೂ ಹೀಗೆಯೇ ಇರಲಿ. ಗವಿಸಿದ್ದೇಶ್ವರನ ಆಶೀರ್ವಾದ ನಿಮ್ಮೆಲ್ಲರ ಮೇಲೆಯೂ ಇರಲಿ. ಮುಂದಿನ ವರ್ಷ ಗವಿಮಠದ ಜಾತ್ರೆಯನ್ನು ಅತಿ ವಿಜೃಂಭಣೆಯಿಂದ ಆಚರಿಸೋಣ ಎಂದು ಶ್ರೀಗಳು ಹೇಳಿದ್ದಾರೆ.
ಜಾತ್ರೆಯ ಹಿನ್ನೆಲೆಯಲ್ಲಿ ಮಠವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಗವಿಮಠದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.