ನಾಳೆ ರಾಷ್ಟ್ರವ್ಯಾಪಿ ರಸ್ತೆ ತಡೆಗೆ ಅನ್ನದಾತರ ಕರೆ

ನವದೆಹಲಿ: ನೂತನ ಕೃಷಿ ಮಸೂದೆಗಳನ್ನ ಖಂಡಿಸಿ ರೈತರು ನಡೆಸುತ್ತಿರುವ ಹೋರಾಟ ದಿನೇ ದಿನೇ ತಾರಕ್ಕೇರುತ್ತಿದೆ. ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಿ ಹಿಂಸಾ ರೂಪ ಪಡೆದ ಬಳಿಕ ರೈತರು ಹಾಗೂ ಸರ್ಕಾರದ ನಡುವಿನ ಕಂದಕ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಫೆಬ್ರವರಿ 6 ರಂದು ದೇಶವ್ಯಾಪ್ತಿ ರಸ್ತೆ ತಡೆಗೆ ಕರೆ ನೀಡಿದ್ದಾರೆ.
ದೆಹಲಿ ರೈತರ ಹೋರಾಟವನ್ನ ಬೆಂಬಲಿಸಿ ರಾಜ್ಯದ ರೈತರು ಸಹ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ಮೂರು ವಿವಾಧಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಹೋರಾಟದಲ್ಲಿ ನಿರತರಾಗಿರುವ ರೈತ ಸಂಘಟನೆಗಳು ಇದೇ ಶನಿವಾರ ಅಂದರೆ ನಾಳೆ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ ನೀಡಿವೆ.
ರಾಜ್ಯದಲ್ಲಿಯೂ ರಾಷ್ಟ್ರಿಯ ಸಂಪರ್ಕ ಕಲ್ಪಿಸುವ ದೇವನಹಳ್ಳಿ ಏರ್ಪೋರ್ಟ್ ರಸ್ತೆ, ತುಮಕೂರು ರಸ್ತೆ, ನೈಸ್ ರೋಡ್, ಓಲ್ಡ್ ಮದ್ರಾಸ್ ರಸ್ತೆ, ಮೈಸೂರು ರಸ್ತೆ ಸೇರಿದಂತೆ ಹಲವು ರಸ್ತೆಗಳನ್ನ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಂದ್ ಆಗಿರಲಿದೆ. ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ, ಹಾಗೂ ದೇಶದ ರಾಜಧಾನಿಯಲ್ಲಿ ನಡೆಸುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ರಾಜ್ಯದ ರೈತರು ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯದ ಹೆದ್ದಾರಿಗಳನ್ನು ಬಂದ್ ಮಾಡಲು ಮುಂದಾಗಿದ್ದಾರೆ.
ರಸ್ತೆ ತಡೆಗೆ ಕಾಂಗ್ರೆಸ್ ಬೆಂಬಲ
ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಾಳೆ ರೈತ ಸಂಘಟನೆಗಳಿಂದ ಹೆದ್ದಾರಿ ಬಂದ್ ಗೆ ಕರೆ ನೀಡಲಾಗಿದೆ. ವಿವಿಧ ಕಡೆಗಳಲ್ಲಿ ರೈತರು ರಸ್ತೆತಡೆ ನಡೆಸಲಿದ್ದು ಕಾಂಗ್ರೆಸ್ ಪಕ್ಷ ಬೆಂಬಲ ಘೋಷಿಸಿದೆ. ದೇಶಾದ್ಯಂತ ರೈತ ಸಂಘಟನೆಗಳಿಂದ ರಸ್ತೆತಡೆ ನಡೆಸಲಿದ್ದು ಉತ್ತರಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಮಾತ್ರ ರಸ್ತೆ ತಡೆ ನಡೆಸದಿರಲು ನಿರ್ಧರಿಸಲಾಗಿದೆ. ರೈತ ಸಂಘಟನೆಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ಘೋಷಿಸಿದೆ.