ಪೊಲೀಸ್ ಇಲಾಖೆಯಲ್ಲಿ ಎಷ್ಟು ಭ್ರಷ್ಟಾಚಾರ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಟ್ರಾಫಿಕ್ ಪೊಲೀಸರು ತಾವೇನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಡುತ್ತಲೇ ಬಂದಿದ್ದಾರೆ. ಈ ಭ್ರಷ್ಟ ಸಂಚಾರಿ ಪೊಲೀಸರನ್ನು ಬೇಟೆ ಆಡಿದ ರಷ್ಯಾ ಅಧಿಕಾರಿಗಳು ಒಬ್ಬನ ಮನೆಯ ಸಿರಿ ಸಂಪತ್ತು ನೋಡಿ ಸ್ವತಃ ಆಘಾತಕ್ಕೆ ಒಳಗಾಗಿದ್ದಾರೆ.
ಹೌದು, ರಷ್ಯಾದಲ್ಲಿ ಸಾವಿರಾರು ಸಂಚಾರಿ ಪೊಲೀಸರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದೆ ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ನೂರಕ್ಕೂ ಅಧಿಕ ಪೊಲೀಸರ ಮನೆಗಳ ಮೇಲೆ ಸತತ ದಾಳಿ ಸಂಘಟಿಸಿದ್ದು, ಒಬ್ಬ ಸಂಚಾರಿ ಪೊಲೀಸ್ ಮನೆಯಲ್ಲಿ ಚಿನ್ನದ ಶೌಚಾಲಯ ಪತ್ತೆಯಾಗಿದ್ದು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈಶಾನ್ಯ ರಷ್ಯಾದ ಸ್ಟಾವರ್ ಪೋಲ್ ವಲಯದ ಪೊಲೀಸ್ ಮುಖ್ಯಸ್ಥನ ಹುದ್ದೆ ಅಲಂಕರಿಸಿರುವ ಪೊಲೀಸ್ ಕರ್ನಲ್ ಅಲೆಕ್ಸಿ ಸಫನೋವಾ ಅವರ ಮನೆ ಮನೆಯಲ್ಲ. ಬದಲಿಗೆ ಐಷಾರಾಮಿ ಬಂಗಲೆಯಾಗಿದೆ. ಈತನನ್ನು ಬಂಧಿಸಿರುವ ಅಧಿಕಾರಿಗಳು ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿ ಕನಿಷ್ಠ 8ರಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಇಡೀ ಬಂಗಲೆ ಅತ್ಯಾಧುನಿಕವಾಗಿದ್ದು, ಶೌಚಾಲಯದ ಗುಂಡಿ ಚಿನ್ನದಿಂದ ನಿರ್ಮಿಸಲಾಗಿದ್ದು, ಅದಕ್ಕೆ ಹೊಂದಿಕೊಂಡಂತೆ ಶೌಚಾಲಯದ ಚಿನ್ನದ ಬಣ್ಣದಿಂದ ಅಲಂಕರಿಸಲಾಗಿದೆ. ಅಷ್ಟೇ ಅಲ್ಲ ಅಡುಗೆ ಮನೆಯ ಡ್ರಾಯರ್ ಗಳಿಗೆ ಕೂಡ ಚಿನ್ನದ ಸ್ಪರ್ಶ ನೀಡಲಾಗಿದೆ.
ಅಧಿಕಾರಿಗಳು ಈ ಪೊಲೀಸ್ ಅಧಿಕಾರಿಯ ಬಂಗಲೆಯ 49 ಸೆಕೆಂಡ್ ಗಳ ವೀಡಿಯೋ ಬಿಡುಗಡೆ ಮಾಡಿದ್ದು, ಇಡೀ ಬಂಗಲೆ ಸ್ವರ್ಣಾಲಂಕೃತಗೊಂಡಿದೆ. ಅಲ್ಲದೇ ದುಬಾರಿ ಬೆಲೆಯ ಮರವನ್ನು ಬಳಸಿ ವಿಶೇಷವಾಗಿ ಅಲಂಕರಿಸಲಾಗಿದ್ದು, ಬಂಗಲೆಯ ಪಕ್ಕದಲ್ಲಿ ಮತ್ತೊಂದು ಮನೆ ನಿರ್ಮಿಸಿದ್ದು ಇದು ಅತಿಥಿಗಳು ತಂಗುವ ಗೆಸ್ಟ್ ಹೌಸ್ ಆಗಿದೆ.