ಚಿತ್ರರಂಗದ ಒತ್ತಡಕ್ಕೆ ಮಣಿದ ಸರ್ಕಾರ : ಶೇ.100 ರಷ್ಟು ಥಿಯೇಟರ್ ಭರ್ತಿಗೆ ಅನುಮತಿ

ಬೆಂಗಳೂರು : ಕನ್ನಡ ಚಿತ್ರರಂಗದ ಒತ್ತಡಕ್ಕೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ ಶೇ. 100ರಷ್ಟು ಥಿಯೇಟರ್ ಭರ್ತಿಗೆ ಅನುಮತಿ ನೀಡಿದೆ. ಅಲ್ಲದೆ, ಕೇಂದ್ರ ಸರಕಾರದ ಮಾರ್ಗಸೂಚಿಯ ಜತೆಗೆ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸುಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದೆ.
ಮಲ್ಟಿಪ್ಲೆಕ್ಸ್ ಗಳಲ್ಲಿ ಒಂದೇ ಬಾರಿಗೆ ವಿರಾಮ ಕೊಡುವಂತಿಲ್ಲ. ಥಿಯೇಟರ್ಗಳಲ್ಲಿ ಪ್ರೇಕ್ಷಕರು ಗುಂಪುಗುಂಪಾಗಿ ಪ್ರವೇಶಿಸುವಂತಿಲ್ಲ. ಪ್ರತಿಯೊಂದು ಪ್ರದರ್ಶನದ ಬಳಿಕ ಚಿತ್ರಮಂದಿರದಲ್ಲಿ ಸ್ಯಾನಿಟೈಸ್ ಮಾಡಬೇಕಿದೆ ಎಂದು ಹೇಳಲಾಗಿದೆ.
ಕಳೆದ ವಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ ಫೆಬ್ರವರಿ 01 ರಂದು ಎಲ್ಲಾ ಚಿತ್ರರಂಗಗಳಲ್ಲೂ ಶೇ.100 ರಷ್ಟು ಪ್ರೇಕ್ಷಕರನ್ನು ಭರ್ತಿ ಮಾಡಲು ಅನುಮತಿ ನೀಡಿತ್ತು. ಆದರೆ, ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಮಾತ್ರ ಶೇ.100 ರಷ್ಟು ಥಿಯೇಟರ್ ಭರ್ತಿಗೆ ಅನುಮತಿ ನೀಡಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ಯಾಂಡಲ್ವುಡ್ ಮಂದಿ ಗರಂ ಆಗಿದ್ದರು.
ಈ ಕುರಿತು ಹಿರಿಯ ನಟ ಶಿವರಾಜ್ ಕುಮಾರ್, ನಟಿ ತಾರಾ ಅನುರಾಧ ಸೇರಿದಂತೆ ಫಿಲ್ಮ್ ಛೇಂಬರ್ನ ಕೆಲಸ ಸದಸ್ಯರು ಆರೋಗ್ಯ ಸಚಿವ ಕೆ ಸುಧಾಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.