ಮೊಹರಂ ಮತ್ತು ಗೌರಿ-ಗಣೇಶ ಹಬ್ಬದ ಪ್ರಯುಕ್ತ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಸೋಂಕನ್ನು ನಿಯಂತ್ರಿಸಲು ಹಲವು ಷರತ್ತುಗಳನ್ನು ವಿಧಿಸಿದೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಗುರುವಾರ ಹೊರಡಿಸಿದ ಆದೇಶದಲ್ಲಿ, ಗೌರಿ ಗಣೇಶ ಹಬ್ಬ, ಕೃಷ್ಣ ಜನ್ಮಾಷ್ಟಮಿ, ಶ್ರಾವಣ ಸೋಮವಾರ, ಮೊಹರಂ ಇತರೆ ಧಾರ್ಮಿಕ ಮತ್ತು ಸಾಮಾಜಿಕ ಸಭೆ ಸಮಾರಂಭಗಳು, ಮೆರವಣಿಗೆ, ಪೂಜೆ ಪ್ರಾರ್ಥನೆಗಳಿಗೆ ಕೋವಿಡ್ ಹಿನ್ನಲೆಯಲ್ಲಿ ನಿರ್ಬಂಧ ವಿಧಿಸಿದ್ದಾರೆ.
ಹಬ್ಬದ ಸಮಯದಲ್ಲಿ ದೇವಸ್ಥಾನಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದ್ದು, ಗಣೇಶ ಚತುರ್ಥಿ ವೇಳೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ ಹಬ್ಬದ ಆಚರಿಸುವ ವೇಳೆ ಸ್ಯಾನಿಟೈಸ್ ಮಾಡತಕ್ಕದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಕನಿಷ್ಟ 6 ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮೊಹಮಂ ಮೆರವಣಿಗೆ ನಿಷೇಧಿಸಲಾಗಿದ್ದು, ತಬ್ಬಿಕೊಳ್ಳುವುದು, ಕೈ ಕುಲುಕಿ ಅಭಿನಂದನೆ ಸಲ್ಲಿಸುವುದನ್ನೂ ನಿರ್ಬಂಧಿಸಲಾಗಿದೆ. ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಬೇಕು. ನಿಗದಿತ ಸ್ಥಳದಲ್ಲಿ ಗಣೇಶ ಮೂರ್ತಿ ವಿಸರ್ಜಿಸಬೇಕು. ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು ಎಂದು ತಿಳಿಸಿದೆ.