ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಮುಂದಿನ ವಾರದಿಂದ ಕ್ಷೇತ್ರದ ಜನಾಭಿಪ್ರಾಯಕ್ಕೆ ಮುಂದಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನಲ್ಲಿ ಮಗನ ಜೊತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಚಿಂತನೆ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜಕೀಯ ನಿಲುವಿನ ಬಗ್ಗೆ ದೃಢ ನಿರ್ಧಾರ ಕೈಗೊಳ್ಳುವ ಹಿನ್ನೆಲೆಯಲ್ಲಿ ಮುಂದಿನ ವಾರದಿಂದ ಜನಾಭಿಪ್ರಾಯಕ್ಕಾಗಿ ಕ್ಷೇತ್ರ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದೇನೆ ಎಂದರು.
ಮುಂಬರುವ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವಂತೆ ಅಭಿಪ್ರಾಯ ಕೇಳಿ ಬರುತ್ತಿವೆ. ನನ್ನ ಮಗ ಹರೀಶ್ ಗೌಡನಿಗೆ ಮೂರು ಕ್ಷೇತ್ರಗಳಿಂದ ಆಹ್ವಾನವಿದೆ. ಹುಣಸೂರು, ಕೆ.ಆರ್ ನಗರ, ಚಾಮರಾಜ ಕ್ಷೇತ್ರದಿಂದ ಆಹ್ವಾನವಿದೆ. . ಇಬ್ಬರೂ ಪಕ್ಷೇತರವಾಗಿ ಸ್ಪರ್ಧಿಸಿದರು ಅಚ್ಚರಿ ಇಲ್ಲ ಎಂದು ಅವರು ಹೇಳಿದರು.
ಮುಂದಿನ ಜಿಪಂ, ತಾಪಂ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಬೆಂಬಲಿಗರನ್ನು ಪಕ್ಷೇತರವಾಗಿ ಕಣಕ್ಕಿಳಿಸುವ ಚಿಂತನೆ ಇದೆ. ಈ ಬಗ್ಗೆ ಮುಂದಿನ ವಾರದಿಂದ ಕ್ಷೇತ್ರ ಪ್ರವಾಸ ಕೈಗೊಳ್ಳುತ್ತೇನೆ. 2008ರಲ್ಲಿ ಮತದಾರರ ಅಭಿಪ್ರಾಯ ಕೇಳದೇ ನಿಂತು ಹುಣಸೂರು ಕ್ಷೇತ್ರದಲ್ಲಿ ಸೋಲಿನ ಅನುಭವ ನನ್ನ ಮುಂದೆ ಇದೆ. ಈಗ ಮತದಾರರನ್ನ ಬಿಟ್ಟು ನಾನು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಜಿಟಿ ದೇವೇಗೌಡ ಸ್ಪಷ್ಟಪಡಿಸಿದರು.