ಸಮಾಜಘಾತುಕ ಕೃತ್ಯಗಳಿಗೆ ಬಳಸಲು ರೌಡಿಗಳಿಗೆ ಗನ್ ಸರಬರಾಜು ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಮೂಲದ ಸತೀಶ್ ಸೇರೆ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಕಾಡುಬೀಸನಹಳ್ಳಿ ಸೋಮನ ಕೊಲೆಗೆ ಗನ್ ಬಳಕೆ ಪ್ರಕರಣ ಬೆನ್ನು ಹತ್ತಿದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶಗಳಲ್ಲಿ ತಯಾರಾಗುವ ನಾಡಪಿಸ್ತೂಲ್ ಗಳನ್ನು 10ರಿಂದ 15 ಸಾವಿರ ರೂ.ಗೆ ಖರೀದಿಸಿ ತರುತ್ತಿದ್ದ ಸತೀಶ್, ಬೆಂಗಳೂರಿನ ರೌಡಿಗಳಿಗೆ 80 ಸಾವಿರದಿಂದ 1 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು.
ಸಿಸಿಬಿ ಪೊಲೀಸರು ಹೈದರಾಬಾದ್ ನಲ್ಲಿ ಸತೀಶ್ ಮತ್ತು ಸಹಚರರನ್ನು ಬಂಧಿಸಿದ್ದು, 4 ಕೊಲೆ ಹಾಗೂ 30ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಹೊಂದಿದ್ದು, ಸೋಮನ ಕೊಲೆಗೆ ರೋಹಿತ್ ಅಂಡ್ ಗ್ಯಾಂಗ್ ಗನ್ ಬಳಸಿತ್ತು. ರೋಹಿತ್ ಅಂಡ್ ಗ್ಯಾಂಗ್ ಬಂಧಿಸಿ ವಿಚಾರಣೆಗೊಳಪಡಿಸಿದಾಗ ದೊರೆತ ಮಾಹಿತಿ ಆಧರಿಸಿ ಸತೀಶ್ ಹಾಗೂ ಸಹಚರರನ್ನು ಬಂಧಿಸಲಾಗಿದೆ.