ಹೆಚ್.ವಿಶ್ವನಾಥ್ ಅವರ ಪರಿಸ್ಥಿತಿ ಕಂಡು ಕನಿಕರ ವ್ಯಕ್ತಪಡಿಸಿದ: ಹೆಚ್.ಎಂ.ರೇವಣ್ಣ!

ಹಾಸನ: ಹೆಚ್.ವಿಶ್ವನಾಥ್ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗಲ್ಲ. ಅವರು ನೊಂದಿದ್ದಾರೆ, ಅವರು ಏನೋ ಮಾಡಲು ಹೋಗಿ ಏನೆನೋ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇವತ್ತಿನ ವಿಶ್ವನಾಥ್ ಪರಿಸ್ಥಿತಿ ಕಂಡು ನನಗೂ ಹಾಗೂ ಎಂಥವರಿಗು ನೋವಾಗುತ್ತಿದೆ ಎಂದು ಕನಿಕರ ವ್ಯಕ್ತಪಡಿಸಿದರು. ವಿಶ್ವನಾಥ್ ಅವನತಿಗೆ ಅವರ ರಾಜಕೀಯ ಇಚ್ಛಾಶಕ್ತಿ ಇಟ್ಟುಕೊಂಡು ಮಾಡಿದ ಕೆಲಸವೇ ಕಾರಣ. ಅದರಿಂದ ಅವರಿಗೆ ಅನ್ಯಾಯವಾಗುತ್ತಿದೆ ಎಂದು ಭಾವಿಸಿದ್ದೇನೆ. ವಿಶ್ವನಾಥ್ ಇಲ್ಲದ್ದಿದ್ದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ಅವರೇ ಮೂಲ ಕಾರಣ, ರಮೇಶ್ ಜಾರಕಿಹೊಳಿ ಎಷ್ಟೇ ಪ್ರಯತ್ನಪಟ್ಟರು ನಂಬರ್ ಗೇಮ್ ಆಗಿರಲಿಲ್ಲ, ಇಂಥಹ ಸಂದರ್ಭದಲ್ಲಿ ಮುಂಬೈಗೆ ಟೀಂ ಒಗ್ಗೂಡಿಸಿದ್ದೆ ಎಚ್.ವಿಶ್ವನಾಥ್, ಅವರಿಗೆ ಅನ್ಯಾಯ ಆಗಿದೆ, ಇನ್ನಾದರೂ ನೆಮ್ಮದಿ ಸಿಗಲಿ ಎಂದರು.
ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸುವ ಹೋರಾಟದಲ್ಲಿ ಸಿದ್ದರಾಮಯ್ಯ ವಿರುದ್ದ ಹೆಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ರಾಜ್ಯದ ಅತ್ಯುತ್ತಮ ಮುಖ್ಯಮಂತ್ರಿ ಆಗಿದ್ದವರು, ನಾನು ಒಂದು ಸಮಾಜಕ್ಕೆ ಸೀಮಿತ ಆದವನಲ್ಲ ಎಂಬ ಭಾವನೆ ಅವರಲ್ಲಿದೆ. ಆದರೆ ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೇಳಿದ್ದಾರೆ. ಆದರು ಕೂಡ ಕುರುಬ ಸಮುದಾಯದ ಎಸ್ಟಿ ಮೀಸಲಾತಿಗೆ ಸೇರಿಸುವ ಹೋರಾಟಕ್ಕೆ ಅವರನ್ನು ಕರೆ ತರಲಾಗುವುದು ಎಂದು ತಿಳಿಸಿದರು.