ಹಾಸನ : ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಸದಸ್ಯನೋರ್ವನನ್ನು ಅಪಹರಣ ಮಾಡಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ಕೋಗಿಲೆಮೆನೆ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.
ಗುರುವಾರ ನಡೆಯಬೇಕಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಶಿವಕುಮಾರ್ ಎಂಬ ಸದಸ್ಯರನ್ನು ಕಿಡ್ನಾಪ್ ಮಾಡಲಾಗಿದೆ.
ಒಟ್ಟು 8 ಮಂದಿ ಸದಸ್ಯ ಬಲ ಹೊಂದಿರುವ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಗುರುವಾರ ಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಸಾವಿತ್ರಿ, ಹೇಮಾವತಿ ಇಬ್ಬರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ತಲಾ ನಾಲ್ಕು ಮಂದಿಯಂತೆ ಎರಡು ಗುಂಪು ಮಾಡಿಕೊಂಡಿದ್ದ ಸದಸ್ಯರು ಪ್ರವಾಸಕ್ಕೆ ತೆರಳಿದ್ರು. ಹೇಮಾವತಿ ಪತಿ ರಘು ಬೆಂಬಲಿತ ಸದಸ್ಯರಾದ ಶಿವಕುಮಾರ್, ಶೇಷಪ್ಪ, ಶಿವವೀರಸಂಗಪ್ಪರ ಜೊತೆ ಕೊಲ್ಲೂರಿಗೆ ತೆರಳಿದ್ದರು. ಈ ಮಧ್ಯೆ ಮತ್ತೊಂದು ತಂಡದಿಂದ ಬಲವಂತವಾಗಿ ಸದಸ್ಯ ಶಿವಕುಮಾರ್ ರನ್ನು ಅಪಹರಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಫೆ.2 ರ ರಾತ್ರಿ ಕೊಲ್ಲೂರು ಸಮೀಪದ ಅರಣ್ಯದ ಬಳಿ ಕಾರನ್ನು ತಡೆದು ಶಿವಕುಮಾರ್ ಅವರನ್ನು ಅಪಹರಿಸಲಾಗಿದೆ ಎಂದು ಕೊಲ್ಲೂರು ಹಾಗೂ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಂದು ನಡೆಯಬೇಕಿದ್ದ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಮುಂದೂಡುವಂತೆ ಸದಸ್ಯರು ಮನವಿ ಮಾಡಿದ್ದಾರೆ.