ಅಪ್ರಾಪ್ತೆಯ ಆತ್ಮಹತ್ಯೆಗೆ ಕಾರಣನಾದ ಯುವಕನ ಬಂಧನ
ಹಾಸನ : ಹೊಳೆನರಸೀಪುರದ ಬಳಿ ನಡೆದಿದ್ದ 16 ವರ್ಷದ ಯುವತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಅಪ್ರಾಪ್ತೆಯ ಜೊತೆ ಪ್ರೀತಿ-ಪ್ರೇಮದ ನಾಟಕವಾಡಿ ಆಕೆಯ ಸಾವಿಗೆ ಕಾರಣನಾಗಿದ್ದ ಯುವಕನನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ. ಯೋಗೇಶ್ ಬಂಧಿತ ಆರೋಪಿ. ಅಪ್ರಾಪ್ತೆಯನ್ನು ಪ್ರೀತಿಸುವುದಾಗಿ ಯೋಗೇಶ್ ನಂಬಿಸಿದ್ದನು. ಅವನು ಮಾಡಿದ ಒಂದು ಫೋನ್ ಕಾಲ್ ಗೆ ಅಪ್ರಾಪ್ತೆ ಜನವರಿ 26 ರ ರಾತ್ರಿ ಮನೆ ಬಿಟ್ಟು ಹೊರಬಂದಿದ್ದಳು. ಮಾರನೇ ದಿನ ಆಕೆಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿತ್ತು. ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿ ಕೆರೆಯಲ್ಲಿ ಬಿಸಾಡಿದಿರುವುದಾಗಿ ಅಪ್ರಾಪ್ತೆಯ ಪೋಷಕರು ಆರೋಪ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ತೀವ್ರಗೊಳಿಸಿದ್ದರು. ಇದೀಗ ಆರೋಪಿ ಯೋಗೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತೆಯನ್ನು ಜ.26 ರ ತಡರಾತ್ರಿ ಮನೆಯಿಂದ ಕರೆಸಿಕೊಂಡ ಯೋಗೇಶ್ ಅತ್ಯಾಚಾರ ಮಾಡಿದ್ದ, ಇದರಿಂದ ಬಾಲಕಿ ನೀನು ಮದುವೆಯಾಗದ ಹೊರತು ನಾನು ಮನೆಗೆ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಳು. ಇದಕ್ಕೆ ಒಪ್ಪದ ಯೋಗೇಶ್ ಬಾಲಕಿಯನ್ನು ಆಕೆಯ ಗೆಳತಿ ಮನೆಯ ಬಳಿ ಬಿಟ್ಟು ಹೋಗಿದ್ದ. ಇದರಿಂದ ಮನನೊಂದು ಅಪ್ರಾಪ್ತ ಬಾಲಕಿ ಗ್ರಾಮದ ಸಮೀಪವಿರುವ ಕೆರೆಗೆ ಹಾರಿ ಸಾವನ್ನಪ್ಪಿದ್ದಳು. ಪೊಲೀಸರು ಆರೋಪಿ ಯೋಗೇಶ್‌ನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. ಓದುವ ವಯಸ್ಸಿನಲ್ಲಿ ಪ್ರೀತಿಯ ನಾಟಕವಾಡಿದ ಯುವಕನ ಮಾತಿಗೆ ಮರುಳಾಗಿ ಅಪ್ರಾಪ್ತೆ ಜೀವ ಕಳೆದುಕೊಂಡಿದ್ದಾಳೆ. ಇದೀಗ ಯೋಗೇಶ್ ಹೊಳೆನರಸೀಪುರ ಗ್ರಾಮಾಂತರ ಪೊಲೀಸರ ಅತಿಥಿಯಾಗಿದ್ದಾನೆ.