ವೈದ್ಯಾಧಿಕಾರಿ ಕಿರುಕುಳ; ಆಸ್ಪತ್ರೆಯ ಮಹಿಳಾ ಸಿಬ್ಬಂದಿಗಳು ನಿತ್ಯ ಕಣ್ಣೀರು.!

ಯಾದಗಿರಿ : ಜಿಲ್ಲೆಯ ಸುರಪುರ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ಆಸ್ಪತ್ರೆಯ ವೈದ್ಯಾಧಿಕಾರಿ ಕಿರುಕುಳ ಹಾಗೂ ದರ್ಪಕ್ಕೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ವೈದ್ಯಾಧಿಕಾರಿ ಡಾ.ಎಂ.ಎಂ.ರಾಹೀಲ್ ಆಡಿದ್ದೆ ಆಟವಾಗಿದೆ.

ದಿನ ನಿತ್ಯ ಸಿಬ್ಬಂದಿಗಳಿಗೆ ಈ ವೈದ್ಯಾಧಿಕಾರಿ ಪುಡಿ ರೌಡಿಯಂತೆ ವರ್ತನೆ ತೋರಿದ್ದಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡಿದ ನೌಕರರು ವೇತನ ಕೇಳಿದ್ರೆ, ಅವರ ಮೇಲೆ ಹಲ್ಲೆ ಮಾಡಿ ಬಾಯಿಗೆ ಬಂದಂತೆ ಬೈದಿದ್ದಾರೆ.! ಇನ್ನು ಕೊವೀಡ್ ಸಂದರ್ಭದಲ್ಲಿ ಟಿಎ&ಡಿಎ ಬಿಲ್ ಹಣ ಕೊಡದೆ ಸಿಬ್ಬಂದಿಗಳಿಗೆ ವೈದ್ಯಾಧಿಕಾರಿ ಸತಾಯಿಸುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಸರ್ಕಾರದಿಂದ ಆಸ್ಪತ್ರೆಗೆ ಪೂರೈಕೆಯಾದ ಔಷಧಿಗಳನ್ನು ಕೂಡ ರೋಗಿಗಳಿಗೆ ಸರಿಯಾಗಿ ವಿತರಣೆ ಮಾಡುವ ಕೆಲಸ ಮಾಡಿಲ್ಲವಂತೆ. ಕಳೆದ ಒಂದೂವರೆ ವರ್ಷದಿಂದ ಡಾಕ್ಟರ್ ಎಂ.ಎಂ. ರಾಹೀಲ್ ಪೇಠ, ಅಮ್ಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಈ ವೈದ್ಯನ ಕಿರುಕುಳಕ್ಕೆ ಸಿಬ್ಬಂದಿಗಳು ಬೇಸತ್ತು ಹೋಗಿದ್ದಾರೆ. ಇನ್ನೊಂದೆಡೆ ವೈದ್ಯನ ಕಿರುಕುಳಕ್ಕೆ ಬೇಸತ್ತ ಸಿಬ್ಬಂದಿಗಳು ಅ ವೈದ್ಯನ ವಿರುದ್ಧ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.