ರಾಜ್ಯದಲ್ಲಿ ದಲಿತ ಸಿಎಂ ನೇಮಕ ಮಾಡಬೇಕಿರುವುದು ನಾನಲ್ಲ. ಪಕ್ಷದ ಹೈಕಮಾಂಡ್ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಚಿಕ್ಕೋಡಿಯಲ್ಲಿ ಪ್ರವಾಹದಿಂದ ಆದ ಹಾನಿ ಕುರಿತು ವೈಮಾನಿಕ ಸರ್ವೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕುರಿತು ಸಂಜೆ ಹೈಕಮಾಂಡ್ ನಿಂದ ಸೂಚನೆ ಬರಲಿದೆ. ಅಲ್ಲಿಯವರೆಗೂ ಕಾದು ನೋಡಿ. ನಿಮಗೂ ತಿಳಿಯಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ನನ್ನ ಮೇಲೆ ವಿಶ್ವಾಸ ಇದೆ. ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕುರಿತು ಅಂತಿಮವಾಗಿ ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಅದರಂತೆ ನಾನು ನಡೆದುಕೊಳ್ಳುತ್ತೇನೆ. ಅವರ ಸೂಚನೆಗಾಗಿ ಕಾದಿರುವೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರವಾಹದಲ್ಲಿ ಆಗಿರುವ ತೊಂದರೆ ವೀಕ್ಷಣೆಗೆ ಆಗಮಿಸಿದ್ದೇನೆ. ಪರಿಹಾರ ವಿತರಣೆ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಮಳೆಯಿಂದಾಗಿ ಸಾಕಷ್ಟು ನಷ್ಟವಾಗಿದೆ. ಸರಕಾರ ನಿಮ್ಮ ಜೊತೆ ಇರುತ್ತೆ. ಅದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದು, ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.