ಬಿಬಿಎಂಪಿ ಕಟ್ಟಡ ಶುಲ್ಕ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ

ಕಟ್ಟಡ ನಿರ್ಮಾಣ ಮಾಡುವ ಸಾರ್ಜನಿಕರಿಂದ ನೆಲ ಬಾಡಿಗೆ, ಪರವಾನಗಿ ಶುಲ್ಕ, ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ, ಪರಿಶೀಲನಾ ಶುಲ್ಕ ಮತ್ತು ಭದ್ರತಾ ಠೇವಣಿಗಳನ್ನು ಪಡೆಯುವ ಅಧಿಕಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಇಲ್ಲ ಎಂದು ಹೈಕೋರ್ಟ್‌ ಆದೇಶಿಸಿದ್ದು ಎಲ್ಲ ಶುಲ್ಕಗಳನ್ನೂ ರದ್ದುಮಾಡಿದೆ.

ಬಿಬಿಎಂಪಿಯ ಶುಲ್ಕ ಮತ್ತು ತೆರಿಗೆ ನೀತಿಯನ್ನು ಪ್ರಶ್ನಿಸಿದ್ದ ಸುಂದರ ಶೆಟ್ಟಿ ಮತ್ತು ಇತರರು ಸಲ್ಲಿಸಿದ್ದ ನೂರಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ನೀಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ‘ಬಿಬಿಎಂಪಿ ಕಟ್ಟಡ ಬೈಲಾ ಪ್ರಕಾರ ವಿಧಿಸುತ್ತಿರುವ ಶುಲ್ಕಗಳು ಕರ್ನಾಟಕ ನಗರಾಡಳಿತ ಕಾಯ್ದೆಗೆ (ಕೆಎಂಸಿ) ವಿರುದ್ಧವಾಗಿವೆ. ಕಾನೂನಿನ ಅನುಮತಿ ಇಲ್ಲದೇ ನಾಗರಿಕರಿಂದ ಒಂದು ರೂಪಾಯಿ ಸಂಗ್ರಹಿಸುವುದಕ್ಕೂ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ನಾಗರಿಕರಿಗೆ ಯಾವುದಾದರೂ ಸೇವೆ ನೀಡಿದಲ್ಲಿ ಮಾತ್ರವೇ ಅವರಿಂದ ಶುಲ್ಕ ಸಂಗ್ರಹಿಸಬಹುದು. ಇಲ್ಲವಾದರೆ, ನಾಗರಿಕರಿಂದ ಪಡೆಯುವ ಮೊತ್ತವು ತೆರಿಗೆಯ ವ್ಯಾಪ್ತಿಗೆ ಸೇರುತ್ತದೆ. ಈಗ ಕಟ್ಟಡ ಬೈಲಾ ಅಡಿಯಲ್ಲಿ ವಿಧಿಸುತ್ತಿರುವ ಶುಲ್ಕವನ್ನು ರಾಜ್ಯ ಸರ್ಕಾರ ಅಥವಾ ಬಿಬಿಎಂಪಿ ಆಡಳಿತವು, ಸೂಕ್ತ ತಿದ್ದುಪಡಿಗಳೊಂದಿಗೆ ಕಾಯ್ದೆ ಮತ್ತು ನಿಯಮಗಳಿಗೆ ಅಡಿಯಲ್ಲಿ ತಂದರೆ ಮಾತ್ರ ಮುಂದುವರಿಸಬಹುದು ಎಂದು ನ್ಯಾಯಪೀಠ ಹೇಳಿದೆ.

ಬಿಬಿಎಂಪಿ ಆಡಳಿತವು ಕಟ್ಟಡ ಬೈಲಾ ಅಡಿಯಲ್ಲಿ ಹಲವು ಬಗೆಯ ಶುಲ್ಕ ವಿಧಿಸುತ್ತಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಕಟ್ಟಡ ನಿರ್ಮಿಸುವವರಿಂದ ಅಭಿವೃದ್ಧಿ ಶುಲ್ಕ ಮತ್ತು ಕಾಂಪೌಂಡ್‌ ಶುಲ್ಕ ಮಾತ್ರ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ ಎಂದು ವಾದಿಸಿದ್ದರು. ಆದರೆ, ಕಟ್ಟಡಗಳ ಬೈಲಾ ಅಡಿಯಲ್ಲಿ ಹಲವು ಬಗೆಯ ಶುಲ್ಕಗಳನ್ನು ವಿಧಿಸಲು ತನಗೆ ಅಧಿಕಾರವಿದೆ ಎಂದು ಬಿಬಿಎಂಪಿ ವಾದಿಸಿತ್ತು.

ಕೆಎಂಸಿ ಕಾಯ್ದೆಯ ಅಡಿಯಲ್ಲಿ ಅವಕಾಶವಿರುವ ಶುಲ್ಕಗಳನ್ನು ಮಾತ್ರ ಪಡೆಯಲು ಬಿಬಿಎಂಪಿಗೆ ಅವಕಾಶವಿದೆ. ಕೆಎಂಸಿ ಕಾಯ್ದೆಯ ಸೆಕ್ಷನ್‌ 295 ಮತ್ತು 423ರ ಅಡಿಯಲ್ಲಿ ಕಟ್ಟಡ ಬೈಲಾ ರಚಿಸಲು ಅವಕಾಶವಿದೆ. ಈ ಎರಡೂ ಸೆಕ್ಷನ್‌ಗಳು ಜನರ ಮೇಲೆ ಹೊಸ ಬಗೆಯ ಶುಲ್ಕ ಹೇರುವ ಅಧಿಕಾರವನ್ನು ಪಾಲಿಕೆಗೆ ನೀಡಿಲ್ಲ’ ಎಂದು ಹೈಕೋರ್ಟ್‌ ತೀರ್ಪಿನಲ್ಲಿ ತಿಳಿಸಿದೆ.

ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಆಧರಿಸಿ ಶುಲ್ಕ ವಿಧಿಸುವ ಪದ್ಧತಿಯು ಸ್ವೇಚ್ಛಾಚಾರದ ತೀರ್ಮಾನವಾಗುತ್ತದೆ. ಅದು ಸಂವಿಧಾನದ 14ನೇ ವಿಧಿಗೆ ವಿರುದ್ಧವಾದುದು. ಮಾರ್ಗಸೂಚಿ ದರದ ಆಧಾರದಲ್ಲಿ ಶುಲ್ಕ ವಿಧಿಸುವ ವ್ಯವಸ್ಥೆಯು ಸಾರ್ವಜನಿಕರ ರಕ್ತ ಹೀರುವುದಕ್ಕೆ ದಾರಿ ಮಾಡಿ ಕೊಟ್ಟಂತೆ ಎಂದು ಪೀಠ ಅಭಪ್ರಾಯಪಟ್ಟಿದೆ.

ಕಾರ್ಮಿಕ ಕಲ್ಯಾಣ ಸೆಸ್‌ ಸಂಗ್ರಹವನ್ನು ಊರ್ಜಿತಗೊಳಿಸಿರುವ ನ್ಯಾಯಾಲಯ, ಈ ಮೊತ್ತವನ್ನು ಮುಂಗಡವಾಗಿ ಪಾವತಿಸುವಂತೆ 2007ರ ಜನವರಿ 18 ಮತ್ತು ಫೆಬ್ರುವರಿ 28ರಂದು ಹೊರಡಿಸಿದ್ದ ಆದೇಶಗಳನ್ನು ರದ್ದುಮಾಡಿದೆ.

ಕೆರೆ ಪುನರುಜ್ಜೀವನ ಶುಲ್ಕ ವಿಧಿಸಲು 2017ರ ಜನವರಿ 27 ಮತ್ತು ಮಾರ್ಚ್‌ 30ರಂದು ಬಿಬಿಎಂಪಿ ಹೊರಡಿಸಿದ್ದ ಸುತ್ತೋಲೆಗಳನ್ನೂ ನ್ಯಾಯಾಲಯ ರದ್ದುಗೊಳಿಸಿದೆ. ನಗರ ಯೋಜನಾ ಕಾಯ್ದೆಯ ಪ್ರಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂತಹ ಯೋಜನಾ ಪ್ರಾಧಿಕಾರಗಳಿಗೆ ಮಾತ್ರ ಅಂತಹ ಶುಲ್ಕ ಸಂಗ್ರಹಿಸುವ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.

ಶುಲ್ಕ ಮರುಪಾವತಿಗೆ ಆದೇಶ

ನ್ಯಾಯಾಲಯದ ಮಧ್ಯಂತರದ ಆದೇಶದ ಅನುಸಾರ, ಶುಲ್ಕ ಪಾವತಿಸಿರುವ ಎಲ್ಲ ಅರ್ಜಿದಾರರಿಗೂ ಬಿಬಿಎಂಪಿ ಆ ಮೊತ್ತವನ್ನು ಮರುಪಾವತಿ ಮಾಡಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!