ಮೈಸೂರು ನನಗೆ ತಾಯಿ ಮನೆ ಅನುಭವ ನೀಡಿದೆ. ಒಬ್ಬ ಮಗಳಾಗಿ ಮೈಸೂರಿನ ಎಲ್ಲ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಮೈಸೂರು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಮೈಸೂರಿನಲ್ಲಿ ನೂತನ ಜಿಲ್ಲಾಧಿಕಾರಿ ಗೌತಮ್ ಬಗಾನಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಾಗಿ ಬಂದ ಜಿಲ್ಲಾಧಿಕಾರಿಗೆ ಶುಭಾಶಯ ಹೇಳಲು ಬಂದಿದ್ದೆ. ಜಿಲ್ಲೆಯ ವಸ್ತುಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ. ಕೋವಿಡ್ ಕೆಲಸಗಳ ಬಗ್ಗೆಯೂ ಮಾಹಿತಿ ನೀಡಿದ್ದೇನೆ ಎಂದರು.
ಈ ವರ್ಗಾವಣೆಯ ನಿರೀಕ್ಷೆ ಮಾಡಿರಲಿಲ್ಲ. ಒಳ್ಳೆಯ ಕೆಲಸ ಮಾಡುವ ಸಮಯದಲ್ಲಿ ಈ ವರ್ಗಾವಣೆ ಆಗಿದೆ. ಆದರೂ ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ. ಏನು ನಡೆದಿದೆ ಹೇಗೆ ನಡೆದಿದೆ ಅನ್ನೋದು ಎಲ್ಲರ ಮುಂದೆ ನಡೆದಿದೆ.ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ರೋಹಿಣಿ ಭಾವನಾತ್ಮಕವಾಗಿ ಹೇಳಿದರು.
ಅವರ ಹತಾಶೆ ಹಾಗೂ ಅಭದ್ರತೆ ಈ ರೀತಿ ಮಾತನಾಡೋದು ಸರಿಯಲ್ಲ. ಯಾವುದೋ ಅಧಿಕಾರಿಯನ್ನ ತೆಗೆಸಿ ಮಿಷನ್ ಮುಗಿಯಿತು ಅಂದುಕೊಳ್ಳೋದು ತಪ್ಪು. ಈ ತರಹ ಬೆಳವಣಿಗೆ ಯಾವ ಜಿಲ್ಲೆ ಯಾವ ಸಂಸ್ಥೆಯಲ್ಲಿ ಆದರೂ ವ್ಯವಸ್ಥೆ ಸರಿ ಮಾಡೋಕೆ ಆಗೋಲ್ಲ ಎಂದು ಪರೋಕ್ಷವಾಗಿ ಶಿಲ್ಪಾ ನಾಗ್ ಬಗ್ಗೆ ಅಸಮಾಧಾನ ಹೊರಹಾಕಿದರು.
ಭೂ ಮಾಫೀಯಾಗೆ ಬಲಿಯಾದ್ರಾ ಎಂಬ ಪ್ರಶ್ನೆಗೆ ನೋ ಕಾಮೆಂಟ್ ಎಂದ ರೋಹಿಣಿ ಸಿಂಧೂರಿ, ಥ್ಯಾಂಕ್ಯೂ ಮೈಸೂರು ಎಂದು ಹೇಳಿ ಮೈಸೂರಿನಿಂದ ನಿರ್ಗಮಿಸಿದರು.