ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಇನ್ ಸ್ಟಾಗ್ರಾಂನಲ್ಲಿ ಹಾಕುವ ಪೋಸ್ಟ್ ನಿಂದಲೇ ಕೋಟಿಗಟ್ಟಲೇ ಸಂಪಾದಿಸುತ್ತಾರೆ ಎಂಬ ವಿಷಯ ನಿಮಗೆ ಗೊತ್ತಾ?
ಹೌದು, ಹೂಪರ್ ಐಕ್ಯೂ ಸಂಸ್ಥೆ ಇತ್ತೀಚೆಗೆ ವಿಶ್ವದ 325 ಗಣ್ಯರು ಇನ್ ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕುವುದರಿಂದ ಎಷ್ಟು ಸಂಪಾದಿಸುತ್ತಿದ್ದಾರೆ ಎಂದು ಪಟ್ಟಿ ಪ್ರಕಟಿಸಿತ್ತು. ಇದರಲ್ಲಿ ವಿಶ್ವದ ನಂ.1 ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ 11 ಕೋಟಿ ರೂ. ಸಂಪಾದಿಸುತ್ತಿದ್ದು, ನಂ.1 ಸ್ಥಾನದಲ್ಲಿದ್ದಾರೆ. ಹಾಲಿವುಡ್ ನಟ ಜಾನ್ಸನ್ ಡ್ವೆಸಮ್ 2ನೇ ಸ್ಥಾನದಲ್ಲಿದ್ದಾರೆ.
ಭಾರತ ಕ್ರಿಕೆಟ್ ತಂಡ ಹಾಗೂ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಒಂದು ಪೋಸ್ಟ್ ಗೆ 6,80,000 ಡಾಲರ್ ಶುಲ್ಕ ವಿಧಿಸುತ್ತಿದ್ದಾರೆ. ಅಂದರೆ ಭಾರತೀಯ ರೂಪಾಯಿ ಪ್ರಕಾರ ಒಂದು ಪೋಸ್ಟ್ ಗೆ ಅವರು ಪಡೆಯುತ್ತಿರುವ ಮೊತ್ತ5 ಕೋಟಿ ರೂಪಾಯಿ! ಕೊಹ್ಲಿಗೆ ಇನ್ ಸ್ಟಾಗ್ರಾಂನಲ್ಲಿ 132 ದಶಲಕ್ಷ ಅಭಿಮಾನಿಗಳು ಇದ್ದು, ಕಳೆದ ವರ್ಷ ಇನ್ ಸ್ಟಾಗ್ರಾಂ ಶ್ರೀಮಂತರ ಪಟ್ಟಿಯಲ್ಲಿ 23ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ 65 ದಶಲಕ್ಷ ಫಾಲೋವರ್ಸ್ ಹೊಂದಿದ್ದು, 27ನೇ ಸ್ಥಾನದಲ್ಲಿದ್ದಾರೆ. ಪ್ರಿಯಾಂಕ ಒಂದು ಪೋಸ್ಟ್ ಗೆ 403,000 ಡಾಲರ್ ಅಂದರೆ 3 ಕೋಟಿ ರೂ. ಸಂಭಾಬನೆ ಪಡೆಯುತ್ತಿದ್ದಾರೆ.