ನನಗೆ ಪ್ರತಿ ತಿಂಗಳು 5 ಲಕ್ಷ ರೂ. ಸಂಬಳ ಬರುತ್ತದೆ. ಆದರೆ ಇದರಲ್ಲಿ 2.75 ಲಕ್ಷ ರೂ,ವನ್ನು ತೆರಿಗೆ ಪಾವತಿಸುತ್ತೇನೆ ಎಂದು ರಾಷ್ಟ್ರಪತಿ ರಾಮನಾಥನ್ ಕೋವಿಂದ್ ಹೇಳಿದ್ದಾರೆ.
ಉತ್ತರ ಪ್ರದೇಶದ ಜಿನ್ ಹಾಕ್ಸ್ ತವರಿಗೆ ಶುಕ್ರವಾರ ಭೇಟಿ ನೀಡಿದ್ದ ವೇಳೆ ರಾಷ್ಟ್ರಪತಿಗಳು ಸ್ಥಳೀಯ ಸಮಾರಂಭವೊಂದರಲ್ಲಿ ಮಾಡಿದ ಭಾಷಣ ಇದೀಗ ವೈರಲ್ ಆಗಿದೆ.
ದೆಹಲಿಯಿಂದ ಕಾನ್ಪುರಕ್ಕೆ ವಿಶೇಷ ರೈಲಿನಲ್ಲಿ ತೆರಳುವ ವೇಳೆ ಮಾರ್ಗ ಮಧ್ಯದಲ್ಲಿ ಬರುವ ಅವರ ತವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು ರೈಲು ನಿಲ್ದಾಣದಲ್ಲಿ ಸರಿಯಾಗಿ ನಿಲ್ಲದೇ ಮುಂದೆ ಹೋಯಿತು ಎಂದು ಬೆಂಕಿ ಹಚ್ಚಲಾಗುತ್ತದೆ. ಬೆಂಕಿ ಹಚ್ಚಿದ್ದು ಯಾಕೆ ಅಂದರೆ ಅದು ಸರಕಾರದ ಆಸ್ತಿ ಎನ್ನುತ್ತಾರೆ. ಅದು ತೆರಿಗೆ ಪಾವತಿದಾರರ ಆಸ್ತಿ. ಅದನ್ನು ಎಲ್ಲರೂ ಪಾವತಿಸುವುದರಿಂದ ಜನರ ಆಸ್ತಿಯಾಗಿದೆ ಎಂದರು.
ನನಗೂ ಪ್ರತಿ ತಿಂಗಳು 5 ಲಕ್ಷ ರೂ. ಸಂಬಳ ಬರುತ್ತದೆ. ಆದರೆ ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 2.75 ಲಕ್ಷ ರೂ. ತೆರಿಗೆ ಕಟ್ಟಬೇಕಿದೆ. ನಾನು ಉಳಿಸಿದ ಹಣಕ್ಕಿಂತ ಹೆಚ್ಚು ಹಣವನ್ನು ಅಧಿಕಾರಿಗಳು ಸಂಪಾದಿಸುತ್ತಿದ್ದಾರೆ. ಅಧ್ಯಾಪಕರು ಕೂಡ ಹೆಚ್ಚು ಸಂಪಾದಿಸುತ್ತಿದ್ದಾರೆ ಎಂದು ಕೋವಿಂದ್ ಹೇಳಿದರು.
ಇದೇ ವೇಳೆ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಅವರು, ಸಾಮಾನ್ಯ ಹಳ್ಳಿಯಿಂದ ಬಂದ ನಾನು ದೇಶದ ಅತ್ಯುನ್ನತ ಸ್ಥಾನ ಅಲಂಕರಿಸುತ್ತೇನೆ ಎಂಬ ಕಲ್ಪನೆಯೇ ಇರಲಿಲ್ಲ. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಈ ಅವಕಾಶ ಕಲ್ಪಿಸಿದೆ ಎಂದುರು.