ಸೆಲೆಬ್ರೆಟಿ ಅಂತ ಹೊಡೆಯೋದು ಬಡಿಯೋದು ದರ್ಶನ್ ಮತ್ತು ಅವರ ಗ್ಯಾಂಗ್ ಗೆ ಸಾಮಾನ್ಯವಾಗಿ ಬಿಟ್ಟಿದೆ. ನಾನೇನು ಗಾಳಿಯಲ್ಲಿ ಗುಂಡು ಹಾರಿಸಿಲ್ಲ. ನನ್ನ ಬಳಿ ಸಾಕ್ಷ್ಯಗಳಿವೆ. ನಿಮ್ಮ ಪಾಳೆಗಾರಿಕೆ ಕರ್ನಾಟಕದಲ್ಲಿ ನಡೆಯಲ್ಲ ಎಂದು ನಿರ್ದೇಶಕ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಗುಡುಗಿದ್ದಾರೆ.
ಮೈಸೂರಿನಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹೋಟೆಲ್ ನಲ್ಲಿ ಸಿಬ್ಬಂದಿಗೆ ಹಲ್ಲೆ ಮಾಡಿರುವುದನ್ನು ಸಾಬೀತುಪಡಿಸಿ ಎಂದು ನಟ ದರ್ಶನ್ ಸವಾಲು ಹಾಕಿದ ಬೆನ್ನಲ್ಲೇ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನ ಬಳಿ ಸಾಕ್ಷ್ಯಾಧಾರಗಳಿವೆ. ದರ್ಶನ್ ಕೇವಲ ಒಂದು ಬಾರಿ ಅಲ್ಲ ಹಲವಾರು ಬಾರಿ ಹಲ್ಲೆ ಮಾಡಿರುವ ಉದಾಹರಣೆಗಳು ನಮ್ಮ ಬಳಿ ಇವೆ ಎಂದರು.
ಸಂದೇಶ್ ನಾಗರಾಜ್ ಮೊದಲು ಗಲಾಟೆ ಆಗಿಲ್ಲ ಅಂದರು. ಆಮೇಲೆ ಆಗಿದೆ. ಆದರೆ ಹಲ್ಲೆ ಆಗಿಲ್ಲ, ಬೈದಿದ್ದು ನಿಜ ಅಂತಾರೆ. ನಿಯಮದ ಪ್ರಕಾರ 60 ದಿನದ ಸಿಸಿಟಿವಿ ದೃಶ್ಯಾವಳಿ ಸಂಗ್ರಹ ಇರಬೇಕು. ಆದರೆ 10 ದಿನದ್ದು ಮಾತ್ರ ಇದೆ ಅಂತಾರೆ. ಹಲ್ಲೆ ಆಗಿರುವುದಕ್ಕೆ ಸಾಕ್ಷ್ಯ ಇದೆ. ಹಲ್ಲೆ ಆಗಿರುವುದು ಹಿಂದಿಯವನು ಅಲ್ಲ. ಕರ್ನಾಟಕದವನೇ. ಆತನ ಹೆಸರು ಗಂಗಾಧರ ಎಂದು ವಿವರಿಸಿದರು.
ಸಂದೇಶ್ ನಾಗರಾಜ್ ಹೋಟೆಲ್ ನಲ್ಲಿ ಮಾತ್ರವಲ್ಲ, ಕ್ಲಬ್ ನಲ್ಲಿ ಹಾಗೂ ತೋಟದ ಸೆಕ್ಯೂರಿಟಿ ಗಾರ್ಡ್ ಮೇಲೆ ಕೂಡ ಹಲ್ಲೆಗಳಾಗಿವೆ. ಒಬ್ಬಾತ ಈಗಲೂ ಕೋಮಾದಲ್ಲಿದ್ದಾರೆ. ಸೆಲೆಬ್ರೆಟಿ ಆಗಿ ಏನೂ ಮಾಡಿದರೂ ತಡೆಯುತ್ತೆ ಅಂದುಕೊಂಡಿದ್ದಾರೆ. ನಿಮ್ಮ ಪಾಳೆಗಾರಿಕೆ ಕರ್ನಾಟಕದಲ್ಲಿ ನಡೆಯೋಲ್ಲ. ತಪ್ಪು ಮಾಡಿದ್ದರೆ ತಪ್ಪಾಗಿದೆ ಎಂದು ಒಪ್ಪಿಕೊಳ್ಳಿ ಎಂದು ಇಂದ್ರಜೀತ್ ಲಂಕೇಶ್ ಆಗ್ರಹಿಸಿದರು.