ಸ್ನೇಹದೀಪ ಸಂಸ್ಥೆ ಅಂಧ ಮತ್ತು ಅಂಗವಿಕಲರ ಬಾಳಿನ ಆಶಾಕಿರಣದಂತೆ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವೆ ಎಂದು ಸಂಸದ ಶಿವಕುಮಾರ ಉದಾಸಿ ಭರವಸೆ ನೀಡಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಸ್ನೇಹದೀಪ ಅಂಧ ಅಂಗವಿಕಲ ಸಂಸ್ಥೆಯಲ್ಲಿ ನಡೆದ ಅಂಧ ಮಿತ್ರರಿಗೆ ಸ್ನೇಹದೀಪದ ನೆರವು(ಆಹಾರ ಕಿಟ್ ವಿತರಣೆ) ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಂಧ ಮಿತ್ರರು,ತಮ್ಮ ಸಮುದಾಯಕ್ಕೆ ಸಹಾಯ ಹಸ್ತ ಚಾಚಿರುವುದು ಶ್ಲಾಘನೀಯ. ಇದೊಂದು ಕಳಕಳಿ ಇರುವ ಕಾರ್ಯಕ್ರಮವಾಗಿದೆ. ಸ್ನೇಹದೀಪ ಸಂಸ್ಥೆ ಕಳದೆ ಮೂರನಾಲ್ಕು ವರ್ಷಗಳಿಂದ ಅಂಧ ಮತ್ತು ಅಂಗವಿಕಲರಿಗೆ ಶಿಕ್ಷಣ ಮತ್ತು ಊಟ ಉಪಚಾರ ಜೊತೆಗೆ ಅವರಿಲ್ಲಿನ ಪ್ರತಿಭೆ ಅನಾವರಣಕ್ಕೆ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಈ ಸಂಸ್ಥೆಗೆ ಸರಕಾರದಿಂದ ಹಾಗೂ ವೈಯಕ್ತಿಕವಾಗಿ ನಾನು ಹೆಚ್ಚಿನ ನೆರವು ನೀಡುತ್ತೇನೆ. ಜೊತೆಗೆ ಈ ಸಂಸ್ಥೆಯಿಂದ ಅಂಧ, ಅಂಗವಿಕಲರಲ್ಲಿನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಆರಂಭಿಸುವುದಾದರೆ, ಅದನ್ನು ಕೇಂದ್ರ ಸರಕಾರದಿಂದ ಮಂಜೂರು ಮಾಡಿಸಿ ಕೊಡುವೆ ಎಂದರು.
ದೇಶದಲ್ಲಿ ಈಗಾಗಲೇ 32 ಕೋಟಿ ಜನರಿಗೆ ವ್ಯಾಕ್ಸಿನ್ ಹಾಕಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಉಳಿದ ಜನರಿಗೆ ವ್ಯಾಕ್ಸಿನ್ ಹಾಕಿಸುವ ಜವಾಬ್ದಾರಿ ಸರಕಾರದ ಮೇಲಿದೆ. ಇಷ್ಟು ದಿನಗಳು ಸರಕಾರದಲ್ಲಿ ಆರೋಗ್ಯಕ್ಕಾಗಿ ಜಿಡಿಪಿಯಲ್ಲಿ ಶೇ.2 ರಷ್ಟು ಅನುದಾನ ಮೀಸಲು ಇಡುತ್ತಿತ್ತು. ಈಗ ಅದನ್ನು ಶೇ 5-6 ಕ್ಕೆ ಏರಿಸುವ ಚಿಂತನೆಯನ್ನು ಸರಕಾರ ಮಾಡುತ್ತಿದೆ. ಇದರಿಂದ ದೇಶದ ಆರೋಗ್ಯ ವ್ಯವಸ್ಥೆ ಸುಧಾರಿಸುತ್ತದೆ ಎಂದರು.
ಸಮಾರಂಭದಲ್ಲಿ ಸ್ನೇಹದೀಪ ಸಂಸ್ಥೆಯ ರಾಣೇಬೆನ್ನೂರು ಸಂಸ್ಥೆಯ ಧರ್ಮದರ್ಶಿ ಕೆ.ಜಿ.ಮೋಹನ, ಕಾರ್ಯನಿರ್ವಾಹಕ ಡಾ.ಪಾಲ್ ಮುದ್ದಾ, ನಿಂಗನಗೌಡ್ರ ವೇದಿಕೆಯಲ್ಲಿದ್ದರು.