ಕೆಸಿ ವ್ಯಾಲಿ ಯೋಜನೆ ತಂದ ರಮೇಶ್ ಕುಮಾರ್ ಮತ್ತು ಕೃಷ್ಣ ಭೈರೇಗೌಡರನ್ನು ಹೊಗಳಿದ್ದಕ್ಕೆ ಜೆಡಿಎಸ್ ನಲ್ಲಿರುವ ದೊಡ್ಡವರಿಗೆ ಸಂಕಟವಾಗಿ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಆದ್ದರಿಂದ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ್ರು ಹಾಗೂ ಅವರ ಮಕ್ಕಳು ಬಹಳ ದೊಡ್ಡವರು, ನನ್ನನು ಬುಧುವಾರ ಪಕ್ಷದಿಂದ ಉಚ್ಛಾಟಿಸಿದ್ದಾರೆ. ಕೆಸಿ ವ್ಯಾಲಿ ಯೋಜನೆಯ ಬಗ್ಗೆ ನಾನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕೃಷ್ಣೇ ಭೈರೇಗೌಡ ರನ್ನು ಹೊಗಳಿದಕ್ಕೆ ಅವರಿಗೆ ಭಾದೆಯಾಗಿದೆ ಎಂದರು.
ಕೆಸಿ ವ್ಯಾಲಿಗೆ ಕೊಚ್ಚೆ ನೀರು ತಂದರು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಆದರೆ ಅದೇ ಕೊಚ್ಚೆ ನೀರು ನಾನು ಕುಡಿದಿಲ್ವಾ? ನಾನು ಸತ್ತು ಹೋಗಿದ್ದೀನಾ? ಕೊಚ್ಚೆ ನೀರು ಆಗಿದ್ದರೆ ನೀವು ಯಾಕೆ ಅಧಿಕಾರದಲ್ಲಿ ಇದ್ದಾಗ ಶುದ್ಧ ನೀರು ಕೊಡಲಿಲ್ಲ ಎಂದು ಅವರು ಪ್ರಶ್ನಿಸಿದರು.
ನಾನು ಒಬ್ಬ ಶಾಸಕ ಅನ್ನೋದಕ್ಕಿಂತ ಮೊದಲು ರೈತನ ಮಗ. ದೇವೇಗೌಡರ ಕುಟುಂಬಕ್ಕೆ ಒಳ್ಳೊಳ್ಳೆ ಅಧಿಕಾರವೇ ಬೇಕು. ಜೆಡಿಎಸ್ ಅನ್ನೋದು ಇವರ ಕುಟುಂಬಕ್ಕೆ ಮಾತ್ರ ಸೀಮಿತನಾ? ಕುಮಾರಸ್ವಾಮಿಗೆ ಬೇರೆ ಜಿಲ್ಲೆಯ ರೈತರ ಬಗ್ಗೆ ಕಾಳಜಿ ಇಲ್ಲ, ಅವರ ಜಿಲ್ಲೆ ಮಾತ್ರ ಅವರಿಗೆ ಸೀಮಿತ ಆಗಿದ್ದಾರೆ. ಮಾತ್ತೆತ್ತಿದ್ರೆ ನಮ್ಮದು ರೈತರ ಕುಟುಂಬ ಅಂತ ಹೇಳಿಕೊಳ್ತಾರೆ ಎಂದು ಅವರು ಹೇಳಿದರು.
ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿರೋದು ಸಂತೋಷ ತಂದಿದೆ. ನಾನು 4 ಪಕ್ಷದಲ್ಲಿ ನಾಲ್ಕು ಬಾರಿ ಶಾಸಕ ಆಗಿದ್ದೇನೆ. ನನ್ನ ಮಗ ರಮೇಶ್ ಕುಮಾರ್ ವ್ಯಾಪ್ತಿಗೆ ಬರುವ ಹೊಳೋರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜಿ.ಪಂ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ. ನಾನು ಡಿಕೆಶಿ ಬಳಿ ಚರ್ಚಿಸಿದ್ದು, ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಅವರು ವಿವರಿಸಿದರು.