ಚಾಮರಾಜನಗರ : ಅರಣ್ಯ ಪ್ರದೇಶದಲ್ಲಿ ಗಂಧದ ಮರ ಕಡಿದು ಮಾರಾಟಕ್ಕೆ ಯತ್ನಿಸುತ್ತಿದ್ದ 8 ಮಂದಿ ಖದೀಮರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಭರಚುಕ್ಕಿ ಅರಣ್ಯ ಪ್ರದೇಶದಲ್ಲಿ ಗಂಧದ ಮರ ಕಡಿಯುತ್ತಿದ್ದ ತಮಿಳುನಾಡು ಮೂಲದ ಸುಮಾರು 8 ಮಂದಿ ಆರೋಪಿಗಳು ಬಂಧಿಸಿದ್ದಾರೆ.
ಅಕ್ರಮವಾಗಿ ಕಾಡಿನೊಳಗೆ ತೆರಳಿ ಗಂಧದ ಮರ ಕಡಿದಿದ್ದು, ಬೆಂಗಳೂರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿ ಆಧಾರದ ಮೇಲೆ ಡಿಸಿಎಫ್ ಏಡು ಕೊಂಡಲು ಮಾರ್ಗದರ್ಶನದಲ್ಲಿ ಎಸಿಫ್ ನೇತೃತ್ವದೊಂದಿಗೆ ಆರ್ಎಫ್ ಓ ಪ್ರವೀಣ್ ಛಲವಾದಿ ತಂಡದ ದೀಪಕ್, ಮಹಾನಂದ, ಕೃಷ್ಣಪ್ಪ, ರವಿ ಕಿರಣ್ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಬಂಧಿತರಿಂದ ಸುಮಾರು 70 ಕೆಜಿ ತೂಕದ ಗಂಧದ ಮರದ ತುಂಡುಗಳು ಹಾಗೂ ಮರ ಕಡಿಯಲು ಬಳಸಿದ ಪರಿಕರಗಳನ್ನು ವಶಪಡಿಸಿಕೊಂಡಿದ್ದು, ಈ ಕೃತ್ಯದಲ್ಲಿ ಇನ್ನೂ ಕೆಲವರು ಇದ್ದಾರೆ ಎಂದು ತಿಳಿದು ಬಂದಿದ್ದು, ಅವರ ಸೆರೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ.