ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಳು ಅಡ್ಡೆಗಳ ಮೇಲೆ ಬೆಳ್ಳಂ ಬೆಳಿಗ್ಗೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ತುಂಗಭದ್ರೆ ದಡದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಅಪಾರ ಪ್ರಮಾಣದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅಧಿಕೃತವಾಗಿ ಪರವಾನಗಿ ಪಡೆದ ಮರಳು ಬ್ಲಾಕ್ ಗಳು ಇದ್ದಾಗಲೂ ಸಹ ಶಿಂಗಟಾಲೂರ ಮತ್ತು ಸುತ್ತಮುತ್ತಲಿನ ಗ್ರಾಮದ ಕೆಲ ಖದೀಮರು ರಾಜಾರೋಷವಾಗಿ ತುಂಗಭದ್ರೆಯ ಒಡಲು ಬಗೆದು ಅಪಾರ ಪ್ರಮಾಣದಲ್ಲಿ ಮರಳು ಸಂಗ್ರಹ ಮಾಡಿದ್ದರು.
ಈ ಬಗ್ಗೆ ಮಾಹಿತಿ ಆಧರಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ರಾಜೇಶ್, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಆಶಪ್ಪ ಪೂಜಾರ ಹಾಗೂ ಪೊಲೀಸ್ ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಂದಿ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ಶಿಂಗಟಾಲೂರ ಗ್ರಾಮದ ವ್ಯಾಪ್ತಿಯ ಹಲವು ಕಡೆಗಳಲ್ಲಿ ಸುಮಾರು 100 ಟಿಪ್ಪರ್ ಮರಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಸುಂದರೇಶ ಬಾಬು ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಸಹ ದಾಳಿ ನಡೆದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.