ಜಿಲ್ಲಾಡಳಿತ ಇತ್ತೀಚೆಗಷ್ಟೇ ಅಕ್ರಮ ಗಣಿಗಾರಿಕೆಗೆ ನಿಷೇಧ ವಿಧಿಸಿದ್ದರೂ ಪ್ರಭಾವಿಗಳ ಹಿಡಿತದಲ್ಲಿರುವ ಕೆಲವು ಗುತ್ತಿಗೆದಾರರು ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ಪುನರಾರಂಭಿಸಿದ್ದು, ಭಾರೀ ಶಬ್ಧದಿಂದ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ.
ಪಾಂಡವಪುರ ತಾಲ್ಲೂಕು ವ್ಯಾಪ್ತಿಯ ಕನಗನಮರಡಿ ಬಳಿಯ ಮೀಸಲು ಮತ್ತು ಡೀಮ್ಡ್ ಅರಣ್ಯ ಪ್ರದೇಶದ ಒತ್ತುವರಿ ಪ್ರದೇಶದಲ್ಲಿ ಸರ್ಕಾರ ನಿಯಮ ಮೀರಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.
ಅಕ್ರಮ ಗಣಿಗಾರಿಕೆಯಿಂದ ಕನಗನಮರಡಿ ಗ್ರಾಮದಲ್ಲಿ ಮನೆಗಳ ಬಿರುಕು ಕಾಣಿಸಿಕೊಂಡಿದ್ದು, ಕಲ್ಲು ಗಣಿಗಾರಿಕೆ ಸ್ಥಳದ ಸಮೀಪದಲ್ಲೇ ಇರುವ ವಿಸಿ ನಾಲೆಯ ಅಕ್ವಾಡೆಕ್ ಸೇತುವೆ ಸೇರಿ ಹುಲಿಕೆರೆ ಸುರಂಗಕ್ಕೂ ಗಂಡಾಂತರ ಉಂಟಾಗಿದೆ.
ಇತ್ತೀಚೆಗಷ್ಟೇ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದ ನಂತರ ತಣ್ಣಗಾಗಿದ್ದ ಅಕ್ರಮ ಗಣಿಗಾರಿಕೆ ಮತ್ತೆ ಗರಿಗೆದರಿದ್ದು, ಅಕ್ರಮ ಗಣಿಗಾರಿಕೆಗೆ ನಿಷೇಧ ಹೇರಿದ್ದರೂ ಪ್ರಭಾವಿಗಳಿಂದ ಅಕ್ರಮ ಕಲ್ಲು ಗಣಿ ಅಕ್ರಮ ನಡೆಯುತ್ತಿದೆ.
ಪ್ರತಿ ದಿನ ಸಂಜೆ ಭಾರೀ ಸ್ಟೋಟಕಗಳ ಮೂಲಕ ಮೆಗ್ಗಾರ್ ಬ್ಲಾಸ್ಟ್ ನಡೆಸಲಾಗುತ್ತಿದ್ದು, ಸ್ಫೋಟಕಗಳ ಬಳಕೆಯಿಂದ ಸುತ್ತಮುತ್ತಲ ಸ್ಥಳದಲ್ಲಿ ಧೂಳು ಮತ್ತು ಮಣ್ಣಿನ ಕಣಗಳಿಂದ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಗುರುವಾರ ಸಹ ಪಾಂಡವಪುರ ವ್ಯಾಪ್ತಿಯಲ್ಲಿ ಕೇಳಿ ಬಂದಿರುವ ಭಾರಿ ಶಬ್ದ ಕೇಳಿ ಬಂದಿದ್ದು, ಜನರು ಆತಂಕಗೊಂಡಿದ್ದಾರೆ.