ಸದ್ಯಕ್ಕೆ ರಾಜಕೀಯಕ್ಕೆ ಬರುವ ಯೋಚನೆ ಇಲ್ಲ: ನಟ ಅಭಿಷೇಕ್ ಅಂಬರೀಶ್

ಹಾಸನ: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಚಿತ್ರರಂಗದ ಹಿರಿಯರೆಲ್ಲಾ ಸರ್ಕಾರದೊಂದಿಗೆ ಮಾತನಾಡಿದ್ದಾರೆ, ಥಿಯೇಟರ್ ಗಳು ಶೇ.100ರಷ್ಟು ತೆರೆಯಲಿವೆ ಎಂದು ನಟ ಅಭಿಷೇಕ್ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೋನಾ ಲಾಕ್ ಡೌನ್ ನಂತರ ಎಲ್ಲಾ ಕ್ಷೇತ್ರಗಳು ರಿಕವರಿ ಆಗುತ್ತಿವೆ, ಸಿನಿಮಾ ಕ್ಷೇತ್ರ ಸ್ವಲ್ಪ ನಿಧಾನವಾಗಿದೆ, ಸಿನಿಮಾಗಳನ್ನು ನೋಡಲು ಚಿತ್ರಮಂದಿರಗಳು ನೂರರಷ್ಟು ಆರಂಭ ಮಾಡಲಿ. ವಿಮಾನಗಳಲ್ಲಿ ಪ್ರಯಾಣಿಸುವಾಗ ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಥಿಯೇಟರ್ ಗಳನ್ನು ತೆರೆಯಲಿ ಎಂದರು.
ಇನ್ನೂ ರಾಜಕೀಯಕ್ಕೆ ಎಂಟ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾನು ಚಿತ್ರರಂಗದಲ್ಲಿದ್ದೇನೆ ಇಲ್ಲಿ ಒಳ್ಳೆಯ ಪ್ರೀತಿ ಸಿಗುತ್ತಿದೆ ಆದ್ದರಿಂದ ಸದ್ಯಕ್ಕೆ ರಾಜಕೀಯಕ್ಕೆ ಬರುವ ಯೋಚನೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಕೆ.ಎಸ್.ಭಗವಾನ್ ಅವರಿಗೆ ಮಸಿ ಬಳಿದ ವಿಚಾರದ ಕುರಿತು ನನಗೆ ಗೊತ್ತಿಲ್ಲ, ವಿಷಯ ತಿಳಿದುಕೊಂಡು ನಂತರ ಪ್ರತಿಕ್ರಿಯಿಸುತ್ತೇನೆ, ವಿಷಯ ತಿಳಿಯದೆ ಮಾತನಾಡುವುದು ಸರಿಯಲ್ಲ ಎಂದರು.