ಬೆಂಗಳೂರು : ಸರ್ಕಾರ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿರುವ ಮತ್ತು ಕರ್ತವ್ಯದ ವೇಳೆ ಮರಣ ಹೊಂದಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಕುಟುಂಬದವರಿಗೆ ಕೂಡಲೇ ಪರಿಹಾರ ವಿತರಿಸುವಂತೆ ಸರ್ಕಾರವನ್ನು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕೊರೊನಾ ವಾರಿಯರ್ಸ್ಗೆ ಬಾಕಿ ಉಳಿಸಿಕೊಂಡಿರುವ ವೇತನವನ್ನೂ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿಗಳ ತಳ ಮಟ್ಟದ ಸಿಬ್ಬಂದಿಗಳು, ಶಿಕ್ಷಕರು, ಆರೋಗ್ಯ ಇಲಾಖೆ, ಪೊಲೀಸ್, ಕಂದಾಯ, ಸಾರಿಗೆ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು, ಪಶುವೈದ್ಯರು ಮುಂತಾದವರು ನೇರವಾಗಿ ಜನರ ಜೊತೆ ಇದ್ದು ಕೆಲಸ ಮಾಡುತ್ತಿದ್ದಾರೆ.
ಇವರುಗಳಿಗೆ ವಿಶೇಷ ರಕ್ಷಣೆಯನ್ನು ನೀಡಬೇಕಾದುದು ಸರ್ಕಾರದ ಪ್ರಧಾನ ಜವಾಬ್ಧಾರಿ. ಆದರೆ ಸರ್ಕಾರ ಇನ್ನೂ ಸಹ ಹಲವು ಇಲಾಖೆಗಳ ಸಿಬ್ಬಂದಿಗಳನ್ನು ಕೊರೊನಾ ವಾರಿಯರ್ಸ್ ಎಂದು ಘೋಷಣೆ ಮಾಡಿಲ್ಲ. ಈಗಾಗಲೇ ಕೊರೊನಾ ವಾರಿಯರ್ಸ್ ಎಂದು ಘೋಷಿಸಿರುವವರಿಗೆ ಕಳೆದ ಎರಡು ಮೂರು ತಿಂಗಳಿಂದ ಸಂಬಳವನ್ನೂ ನೀಡಿಲ್ಲ.
ಜೀವವನ್ನು ಪಣಕ್ಕೊಡ್ಡಿ ಕೆಲಸ ಮಾಡುತ್ತಿರುವ ಇವರೆಲ್ಲರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ಅಮಾನವೀಯವಾಗಿದೆ. ದೇಶದ ರಾಜ್ಯಗಳಲ್ಲೆ ಆರ್ಥಿಕ ಸ್ಥಿತಿಯಲ್ಲಿ ಮೊದಲೆರಡು ಸ್ಥಾನಗಳಲ್ಲೇ ಇರುವ ಕರ್ನಾಟಕದಲ್ಲಿ ಕನಿಷ್ಠ ಮಾಸ್ಕ್, ಸ್ಯಾನಿಟೈಸರ್ ನೀಡುವಷ್ಟು ಹೃದಯವಂತಿಕೆ, ಕರ್ತವ್ಯ ಪ್ರಜ್ಞೆ, ಉದಾರತೆಗಳನ್ನು ಆಡಳಿತ ನಡೆಸುವ ಸರ್ಕಾರ ಕಳೆದುಕೊಂಡಿರುವುದು ಅತ್ಯಂತ ಬೇಜವಾಬ್ಧಾರಿಯುತವಾದ ಹಾಗೂ ಅವಮಾನಕರವಾದ ಸಂಗತಿ. ಆದ್ದರಿಂದ ಕೂಡಲೇ ಅವರ ಬೇಡಿಕೆಗಳನ್ನು ಪರಿಗಣಿಸಿ ಈಡೇರಿಸಬೇಕೆಂದು ಆಗ್ರಹಿಸುತ್ತೇನೆ.