ಅಶ್ಲೀಲ ಪದ ಬಳಸಿ ವಿವಾದಕ್ಕೆ ಗುರಿಯಾಗಿದ್ದ ಸಚಿವ ಕೆ.ಎಸ್. ಈಶ್ವರಪ್ಪ ನಂತರ ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ನಾಲಗೆ ಹರಿಬಿಡುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಗೆ ಅನ್ನಪೂರ್ಣೇಶ್ವರಿ ಎಂದು ಮರುನಾಮಕರಣ ಮಾಡುವ ಪ್ರಸ್ತಾಪಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ತಮ್ಮ ಕಚರಿಯಲ್ಲಿ ಇಂದಿರಾ ಕ್ಯಾಂಟೀನ್ ಬೇಕಾದರೂ ತೆರೆಯಲಿ, ಹುಕ್ಕಾ ಬಾರ್ ಆದರೂ ತೆರೆಯಲಿ. ಇಂದಿರಾ ಹೆಸರಲ್ಲಿ ಕ್ಯಾಂಟಿನ್ ತೆರೆಯಿರಿ ಅಥವಾ ನೆಹರೂ ಹೆಸರಲ್ಲಿ ಹುಕ್ಕಾ ಬಾರ್ ಆದರೂ ತೆರೆಯಿರಿ. ಯಾರು ವಿರೋಧಿಸುತ್ತಾರೆ ಎಂದು ಹೇಳಿಕೆ ನೀಡಿದರು. ಆದರ ಕಷ್ಟಕಾಲದಲ್ಲಿರುವ ಬಡವರಿಗೆ ಉಪಹಾರ ನೀಡುವ ಕ್ಯಾಂಟೀನ್ ಗೂ ಹುಕ್ಕಾ ಬಾರ್ ಗೂ ಏನು ಸಂಬಂಧ ಎಂಬುದು ಹೇಳಲಿಲ್ಲ.
ಇದೇ ವೇಳೆ ರಾಜ್ಯದ ಜನರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆಗೆ ತಮ್ಮದೇ ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಅಣ್ಣಾಮಲೈ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡುವ ಬದಲು ನಾನು ಈ ದೇಶದ ಪರ. ನಮ್ಮ ಪಕ್ಷ ರಾಷ್ಟ್ರೀಯ ಪಕ್ಷ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜ್ಯದ ನಿಲುವಿನ ವಿರುದ್ಧ ಮಾತನಾಡಿದರು.
ಸಿಟಿ ರವಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಟಿ ರವಿಗೆ ಸಂಸ್ಕೃತಿ ಅನ್ನೋದೇ ಇಲ್ಲ. ಗೌರವ ಕೊಡೋದು ಗೊತ್ತಿಲ್ಲ. ನಾನು ಅದೇ ತರಹ ವಾಜಪೇಯಿ, ಅಡ್ವಾಣಿ ಬಗ್ಗೆ ಮಾತನಾಡಿದ್ದೇವಾ? ಸ್ವಾತಂತ್ರ್ಯ ಹೋರಾಟ ಏನಾದರೂ ಮಾಡಿದ್ದನಾ ಎಂದು ಪ್ರಶ್ನಿಸಿದರು.