100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಕನಸು ಕೂಡ ಕಂಡಿರಲಿಲ್ಲ. ಎಲ್ಲರ ದೇವರ ಕೃಪೆ ಎಂದು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧ ಶುಕ್ರವಾರ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಕೊಹ್ಲಿ 100 ಟೆಸ್ಟ್ ಪಂದ್ಯಗಳನ್ನು ಆಡಿದ ಭಾರತದ ಕೆಲವೇ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ.
ಭಾರತದ ಪರ 100 ಟೆಸ್ಟ್ ಆಡಿದ 12ನೇ ಆಟಗಾರ ಎಂಬ ಗೌರವಕ್ಕೆ ಕೊಹ್ಲಿ ಪಾತ್ರರಾಗಲಿದ್ದಾರೆ. ಈ ಪಂದ್ಯವನ್ನು ವಿಶೇಷವನ್ನಾಗಿ ಮಾಡಲು ಆಟಗಾರರು ಸಿದ್ಧತೆ ಕೂಡ ನಡೆಸಿದ್ದಾರೆ.
ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಸುನೀಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಕಪಿಲ್ ದೇವ್, ದಿಲೀಪ್ ವೆಂಗ್ ಸರ್ಕಾರ್, ಇಶಾಂತ್ ಶರ್ಮ ಮತ್ತು ಹರ್ಭಜನ್ ಸಿಂಗ್ ಇದುವರೆಗೆ ಭಾರತ ತಂಡದ ಪರ 100 ಟೆಸ್ಟ್ ಆಡಿದ ಆಟಗಾರರಾಗಿದ್ದಾರೆ.
ನಿಜವಾಗಲೂ ನಾನು ಭಾರತದ ಪರ 100 ಟೆಸ್ಟ್ ಆಡುತ್ತೇನೆ ಎಂದು ಊಹಿಸಿರಲಿಲ್ಲ. ಇದು ಅತ್ಯಂತ ದೊಡ್ಡ ಪ್ರಯಾಣ. 100 ಟೆಸ್ಟ್ ಜೊತೆಗೆ ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. 100 ಟೆಸ್ಟ್ ಆಡಲು ನನಗೆ ಸಾಧ್ಯವಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಇದು ನನಗೆ, ನನ್ನ ಕೋಚ್ ಮತ್ತು ನನ್ನ ಕುಟುಂಬಕ್ಕೆ ಮಹತ್ವದ ದಿನ. ಅವರೆಲ್ಲರೂ ಸಂಭ್ರಮಿಸುತ್ತಿದ್ದು, ಹೆಮ್ಮೆಪಡುತ್ತಿದ್ದಾರೆ ಎಂದು ಕೊಹ್ಲಿ ಹೇಳಿದರು.