ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ 1 ಚಿನ್ನ ಸೇರಿದಂತೆ 7 ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಅತೀ ಹೆಚ್ಚು ಪದಕ ಗೆದ್ದ ದಾಖಲೆ ಬರೆದಿದೆ.
ಪದಕ ಪಟ್ಟಿಯಲ್ಲಿ 67ನೇ ಸ್ಥಾನದಲ್ಲಿದ್ದ ಭಾರತ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಸುಮಾರು 20 ಸ್ಥಾನ ಬಡ್ತಿ ಪಡೆದು 47ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಭಾರತ ಈ ಒಲಿಂಪಿಕ್ಸ್ ನಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚು ಸೇರಿದಂತೆ 7 ಪದಕ ಗೆದ್ದುಕೊಂಡಿದೆ.
38 ಚಿನ್ನ, 31 ಬೆಳ್ಳಿ ಹಾಗೂ 18 ಕಂಚು ಸೇರಿದಂತೆ 81 ಪದಕ ಗೆದ್ದಿರುವ ಚೀನಾ ಅಗ್ರಸ್ಥಾನದಲ್ಲಿದ್ದರೆ, 34 ಚಿನ್ನ, 38 ಬೆಳ್ಳಿ ಹಾಗೂ 33 ಕಂಚು ಒಳಗೊಂಡಂತೆ 105 ಪದಕ ಸಂಪಾದಿಸಿರುವ ಅಮೆರಿಕ 2ನೇ ಸ್ಥಾನದಲ್ಲಿದೆ. ಆತಿಥಯೇ ಜಪಾನ್ 26 ಚಿನ್ನ, 12 ಬೆಳ್ಳಿ, 17 ಕಂಚು ಸೇರಿದಂತೆ 55 ಪದಕದೊಂದಿಗೆ ಮೂರನೇ ಸ್ಥಾನದಲ್ಲಿದೆ.
ಭಾರತ ಲಂಡನ್ ಒಲಿಂಪಿಕ್ಸ್ ನಲ್ಲಿ 6 ಪದಕ ಗೆದ್ದಿರುವುದು ಇದುವರೆಗಿನ ದಾಖಲೆಯಾಗಿತ್ತು. ಆದರೆ ಈ ಬಾರಿ ಭಾರತ 7 ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದೆ. ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ 2008ರಲ್ಲಿ ಶೂಟಿಂಗ್ ನಲ್ಲಿ ಅಭಿನವ್ ಬಿಂದ್ರಾ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.