ಲಂಕೆಗೆ ಭರ್ಜರಿ ಉಡುಗೊರೆ: ದ್ವೀಪರಾಷ್ಟ್ರಕ್ಕೆ ಕೋವಿಡ್ 19 ಲಸಿಕೆ ಕಳಿಸಲು ಮುಂದಾದ ಭಾರತ

ನವದೆಹಲಿ: ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ಭಾರತ ಕೋವಿಶೀಲ್ಡ್ ಕೋವಿಡ್- 19 ಲಸಿಕೆಯನ್ನು ಕಳಿಸಲು ಮುಂದಾಗಿದೆ. 5 ಲಕ್ಷ ಡೋಸ್ ನಷ್ಟು ಲಸಿಕೆಯ ಇಂದು ಸಂಜೆಯ ವೇಳೆಗೆ ಭಾರತದಿಂದ ಶ್ರೀಲಂಕಾ ತಲುಪಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಈಗಾಗಲೇ ಭಾರತ ನೇಪಾಳ ಮತ್ತು ಬಾಂಗ್ಲಾದೇಶಗಳಿಗೆ ಕೋವೀಶೀಲ್ಡ್ ಲಸಿಕೆಯನ್ನು ರವಾನಿಸಿದೆ. ಸೇರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ- ಆಸ್ಟ್ರಾಜೆನಿಕಾ ಜಂಟಿಯಾಗಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿವೆ. ಶ್ರೀಲಂಕಾದಲ್ಲಿ ಕೊರೋನಾಗೆ ಸಂಬಂಧಿಸಿದಂತೆ ಮುಂಚೂಣಿಯಲ್ಲಿ ಹೋರಾಡಿದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಉದ್ದೇಶಿಸಿದೆ. ಭಾರತದಿಂದ ಇಂದು ಬರಲಿರುವ ಕೋವಿಶೀಲ್ಡ್ ಕೋವಿಡ್-19 ಲಸಿಕೆಗಳನ್ನು ಶ್ರೀಲಂಕಾ ಅಧ್ಯಕ್ಷರು ಕೊಲಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಿದ್ದಾರೆ ಎಂದು ಶ್ರೀಲಂಕಾ ಸರ್ಕಾರದ ಮೂಲಗಳು ಹೇಳಿವೆ. ಇನ್ನು, ನೆರೆ ರಾಷ್ಟ್ರಗಳ ನೀತಿಗೆ ಅನುಗುಣವಾಗಿ ಈಗಾಗಲೇ ಭಾರತ ಭೂತಾನ್, ಮಾಲ್ಡೀವ್ಸ್, ನೇಪಾಳ, ಮಯನ್ಮಾರ್ , ಬ್ರೆಜಿಲ್, ಮೊರೊಕ್ಕೋ ಸೇರಿದಂತೆ ಕೆಲವು ದೇಶಗಳಿಗೆ ಕೋವಿಡ್- 19 ಲಸಿಕೆಯನ್ನು ಭಾರತ ರವಾನಿಸಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.