ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಳಿಸುತ್ತಿರುವುದರಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನಗಳು ನಡೆದಿರುವ ನಡುವೆ ಕೆಲವರು ಸ್ವದೇಶಕ್ಕೆ ಹಿಂತಿರುಗಲು ನಿರಾಕರಿಸುತ್ತಿದ್ದು, ಇದಕ್ಕೆ ವಿಚಿತ್ರ ಬೇಡಿಕೆಗಳನ್ನು ಇಡುತ್ತಿದ್ದಾರೆ.
ಒಬ್ಬರು ಸಾಕು ನಾಯಿ ತರಲು ಅವಕಾಶ ನೀಡಿದರೆ ಮಾತ್ರ ಸ್ವದೇಶಕ್ಕೆ ಮರಳುವುದಾಗಿ ಪಟ್ಟು ಹಿಡಿದಿದ್ದರೆ, ಮತ್ತೊಬ್ಬರು ಎಲ್ಲ ಭಾರತೀಯರು ಸುರಕ್ಷಿತವಾಗಿ ಹಿಂತಿರುಗಿದ ನಂತರ ನಾವು ಮರಳುವುದಾಗಿ ಹೇಳಿದ್ದಾರೆ. ಆದರೆ ಇಲ್ಲೊಬ್ಬ ಭಾರತೀಯ ಮೂಲದ ವೈದ್ಯ ತಾನು ಸಾಕು ಕಾಡುಪ್ರಾಣಿಗಳನ್ನು ಕರೆತರಲು ಅವಕಾಶ ನೀಡಿದರೆ ಮರಳುವುದಾಗಿ ಪಟ್ಟು ಹಿಡಿದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ 12ನೇ ದಿನಕ್ಕೆ ಕಾಲಿಟ್ಟಿದೆ. ಭಾರತೀಯರು ಸೇರಿದಂತೆ ನಾಗರಿಕರು ಸುರಕ್ಷಿತ ಪ್ರದೇಶಕ್ಕೆ ತೆರಳಲು ಅವಕಾಶ ನೀಡಲು ಕದನವಿರಾಮ ಘೋಷಿಸಲಾಗಿತ್ತು. ಈ ಭಾರತೀಯ ಮೂಲದ ವೈದ್ಯ ತಾನು ಮುದ್ದಾಗಿ ಸಾಕಿದ ಪ್ಯಾಂಥರ್ (ಕಪ್ಪುಚಿರತೆ) ಮತ್ತು ಚಿರತೆಯನ್ನು ಉಕ್ರೇನ್‍ನಲ್ಲಿ ಬಿಟ್ಟು ಭಾರತಕ್ಕೆ ಬರಲು ಹಿಂದೇಟು ಹಾಕಿದ್ದಾನೆ.
ಡಾನ್ ಬಾಸ್ ಪ್ರದೇಶದ ಸೆವೆರೊಡೊನೆಟ್ಸ್ಕ್‍ನಲ್ಲಿ ನೆಲೆಸಿರುವ ಭಾರತೀಯ ವೈದ್ಯ ಡಾ. ಗಿರಿಕುಮಾರ್ ಪಾಟೀಲ್ ಯುದ್ಧ ಪೀಡಿತ ಉಕ್ರೇನ್‍ನಲ್ಲಿ ನೆಲಮಾಳಿಗೆಯಲ್ಲಿ ಪ್ಯಾಂಥರ್ ಮತ್ತು ಚಿರತೆ ಸಾಕಿದ್ದಾರೆ. ಯುದ್ಧದ ಹಿನ್ನೆಲೆ ಗಿರಿಕುಮಾರ್ ಅವರು ತಮ್ಮ ಮನೆಯ ಕೆಳಗಿನ ಬಂಕರ್‍ನಲ್ಲಿ ವಾಸಿಸುತ್ತಿದ್ದಾರೆ. ದೇಶಕ್ಕೆ ಮರಳುವಂತೆ ಅಧಿಕಾರಿಗಳು ಸೂಚಿಸಿದರೂ ಆವರು ಮಾತ್ರ ತಮ್ಮ ಪ್ರಾಣಿಗಳನ್ನು ಬಿಡಲು ಸಿದ್ಧವಿಲ್ಲ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಜೀವವನ್ನು ಉಳಿಸಲು ನಾನು ನನ್ನ ಸಾಕುಪ್ರಾಣಿಗಳನ್ನು ಎಂದಿಗೂ ಬಿಡುವುದಿಲ್ಲ. ಯುದ್ಧದ ಹಿನ್ನೆಲೆ ನನ್ನ ಕುಟುಂಬ ಸಹ ನನ್ನನ್ನು ಹಿಂತಿರುಗುವಂತೆ ಒತ್ತಾಯಿಸುತ್ತಿದೆ. ಆದರೆ ನನ್ನ ಸಾಕುಪ್ರಾಣಿಗಳು ನನ್ನ ಮಕ್ಕಳು. ನಾನು ಅವರೊಂದಿಗೆ ಇರುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಅವರನ್ನು ರಕ್ಷಿಸುತ್ತೇನೆ ಎಂದು ಭಾವನಾತ್ಮಕವಾಗಿ ತಿಳಿಸಿದ್ದಾರೆ.
ಡಾ.ಪಾಟೀಲ್ 2007ರಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್‍ಗೆ ತೆರಳಿದ್ದು, ಡಾನ್‍ಬಾಸ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ಮೂಳೆ ಚಿಕಿತ್ಸಕರಾಗಿ ಸೇರಿಕೊಂಡರು. ಅವರು ಮೃಗಾಲಯದಲ್ಲಿ ಪ್ಯಾಂಥರ್ ಮತ್ತು ಚಿರತೆಯನ್ನು ಅಧಿಕಾರಿಗಳ ಅನುಮತಿ ಮೇರೆಗೆ ದತ್ತು ಪಡೆದು ಸಾಕುತ್ತಿದ್ದಾರೆ. ಅಲ್ಲದೆ ಈ ಪ್ರಾಣಿಗಳಿಗೆ ಜಾಗ್ವಾರ್ ಮತ್ತು ಪ್ಯಾಂಥರ್ ಎಂದು ಹೆಸರನ್ನು ಇಟ್ಟಿದ್ದಾರೆ.
ಜಾಗ್ವಾರ್ ಗೆ 20 ತಿಂಗಳು ಮತ್ತು ಹೆಣ್ಣು ಪ್ಯಾಂಥರ್ 6 ತಿಂಗಳು ವಯಸ್ಸಾಗಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತನುಕು ಮೂಲದ ಗಿರೀಶ್ ಕುಮಾರ್, ಸಾಕುಪ್ರಾಣಿಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಭಾರತ ಸರ್ಕಾರವು ಅವಕಾಶ ನೀಡುತ್ತದೆ ಎಂದು ಪಾಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.