ವಾರಾಣಾಸಿ: ಕೇವಲ ಒಂದು ಟ್ವೀಟ್ ನಿಂದ ತನ್ನ ವೇಗವನ್ನು ಹೆಚ್ಚಿಸಿಕೊಂಡ ವಿಶಿಷ್ಟ ಘಟನೆ ವಾರಣಾಸಿಯಲ್ಲಿ ನಡೆದಿದೆ. ಅಲ್ಲದೇ ಈ ಟ್ವೀಟ್ ವಿದ್ಯಾರ್ಥಿನಿಯೊಬ್ಬರು ಸರಿಯಾದ ಸಮಯಕ್ಕೆ ತೆರಳಿ ಪರೀಕ್ಷೆ ಬರೆಯುವಂತೆ ಮಾಡಿದೆ. ಗಾಜಿಪುರದ ತಬ್ಸಮ್ ಎಂಬುವವರು ವಾರಣಾಸಿಯ ವಲ್ಲಭ್ ವಿದ್ಯಾಲಯದಲ್ಲಿ ಬ್ಯಾಂಕ್ ಪರೀಕ್ಷೆಯನ್ನು ಬರೆಯಬೇಕಿತ್ತು. ಹೀಗಾಗಿ ತಬ್ಸಮ್ ಗಾಜಿಪುರದಿಂದ ವಾರಾಣಾಸಿಗೆ ರೈಲಿನಲ್ಲಿ ತೆರಳಬೇಕಿತ್ತು. ಆದರೆ ರೈಲು ಗಾಜಿಪುರಕ್ಕೆ ಮೂರು ತಾಸು ತಡವಾಗಿ ಆಗಮಿಸಿತು. ಮೂರು ಗಂಟೆ ವಿಳಂಬವಾಗಿ ಬಂದ ರೈಲು ಇದೇ ವೇಗದಲ್ಲಿ ತೆರಳಿದರೆ ವಾರಣಾಸಿಯನ್ನು ತಡವಾಗಿ ತಲುಪುತ್ತದೆ ಎಂದರಿತ ವಿದ್ಯಾರ್ಥಿನಿಯ ಸಹೋದರ ಅನ್ವರ್ ಭಾರತೀಯ ರೈಲ್ವೇ ಸೇವಾ ಖಾತೆಗೆ ಟ್ವೀಟ್ ಮಾಡಿದ್ದಾರೆ.
ತಂಗಿಯ ಪರೀಕ್ಷಾ ಕೇಂದ್ರ, ಹಾಲ್ ಟಿಕೆಟ್ ಫೋಟೋ, ರೈಲ್ವೇ ನಂಬರ್ ಬರೆದು ನನ್ನ ತಂಗಿಯ ಪರೀಕ್ಷೆಗೆ ವಿಳಂಬವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ತಕ್ಷಣವೇ ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಟ್ವೀಟ್ ನ್ನು ಪರಿಶೀಲಿಸಿದ್ದಾರೆ. ಈ ಮಾಹಿತಿ ನಿಜವೆಂದು ಅರಿತ ಅಧಿಕಾರಿಗಳು ಛಾಪ್ರಾ ವಾರಾಣಾಸಿ ಎಕ್ಸಪ್ರೆಸ್ ರೈಲಿನ ಚಾಲಕನಿಗೆ ವೇಗ ಹೆಚ್ಚಿಸಿಕೊಳ್ಳಲು ಹೇಳಿದ್ದಾರೆ. ಇದರಿಂದ ಕೇವಲ ಎರಡು ಗಂಟೆ ವಿಳಂಬದೊಂದಿಗೆ ಬೆಳಗ್ಗೆ 11ಕ್ಕೆ ರೈಲು ವಾರಾಣಾಸಿ ತಲುಪಿತು. ತಂಗಿಯನ್ನು ಸರಿಯಾದ ಸಮಯಕ್ಕೆ ಪರೀಕ್ಷೆ ಮಾಡಲು ಸಹಾಯ ಮಾಡಿದ ರೈಲ್ವೇ ಇಲಾಖೆಗೆ ವಂದನೆಗಳು ಎಂದು ಅನ್ವರ್ ಟ್ವೀಟ್ ಮಾಡಿದ್ದಾರೆ. ಕೇವಲ ಒಂದು ಟ್ವಿಟ್ ಗೆ ಈ ಪರಿ ಸ್ಪಂದಿಸಿದ ರೈಲ್ವೇ ಇಲಾಖೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.