ನವದೆಹಲಿ: ದೇಶಾದ್ಯಂತ ಕೋವಿಡ್ ಸೋಂಕು ಪ್ರಕರಣಗಳು ನಿಯಂತ್ರಣ ಮೀರುತ್ತಿವೆ. ಹಲವು ಕಠಿಣ ನಿರ್ಬಂಧಗಳ ನಡುವೆಯೂ ಸೋಂಕು ಪ್ರಕರಣಗಳು ಕೈ ಮೀರುತ್ತಿವೆ. ಗುರುವಾರ 2,17,353 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 1,18,302 ಜನ ಮಾತ್ರ.
ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,42,91,917ಕ್ಕೆ ಏರಿಕೆ ಆಗಿದೆ. ಗುರುವಾರ 1,185 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 1,74,308ಕ್ಕೆ ಏರಿಕೆ ಆಗಿದೆ.
ಈವರೆಗೆ ದೇಶಾದ್ಯಂತ ಒಟ್ಟು 11,72,23,509 ಜನರಿಗೆ ಲಸಿಕೆ ಹಾಕಲಾಗಿದೆ. ಏಪ್ರಿಲ್ 1ರಿಂದ 45 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಎಲ್ಲರಿಗೂ ಕೊರೋನಾ ಲಸಿಕೆ ಹಾಕಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಕೊರೋನಾ ಪ್ರಕರಣಗಳ ಪೈಕಿ ಶೇಕಡಾ 90ರಷ್ಟು ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಕೇರಳ, ಛತ್ತೀಸ್ಘಢ, ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ದೆಹಲಿ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕಂಡು ಬರುತ್ತಿವೆ. ಇನ್ನು ರಾಜ್ಯದಲ್ಲೂ ಕೋವಿಡ್ ಪ್ರಕರಣಗಳು ಮಿತಿ ಮೀರುತ್ತಿದ್ದು ರಾತ್ರಿ ಕರ್ಫ್ಯೂ ಹೇರಲಾಗಿದೆ.