ಜಕಾರ್ತಾ: ಇಂಡೋನೇಷ್ಯಾದ ಹಳ್ಳಿಯೊಂದು ಕಲರ್ ಫುಲ್ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಈ ಹಳ್ಳಿ ಕೆಂಬಣ್ಣದ ನೀರಲ್ಲಿ ಮುಳುಗೆದ್ದಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಜೆನ್ ಗಾಟ್ ಎಂಬ ಗ್ರಾಮ ಪ್ರವಾಹದಿಂದ ಮುಳುಗಿದೆ. ಪ್ರವಾಹದ ನೀರು ಇಲ್ಲಿನ ಕಾರ್ಖಾನೆಯೊಂದರ ಡೈ ನೊಂದಿಗೆ ಬೆರೆತ ಪರಿಣಾಮ ಪ್ರವಾಹದ ನೀರು ಕೆಂಬಣ್ಣಕ್ಕೆ ತಿರುಗಿದೆ.
ಜಾವಾ ದ್ವೀಪದಲ್ಲಿರುವ ಈ ಹಳ್ಳಿಯಲ್ಲಿ ಸಾಕಷ್ಟು ಜವಳಿ ಕಾರ್ಖಾನೆಗಳಿವೆ. ಬಟ್ಟೆಗಳಿಗೆ ಬಣ್ಣ ಬಳಿಯುವ ಕಾರ್ಖಾನೆಗಳಲ್ಲಿದ್ದ ಡೈ ನಿಂದ ಹೀಗಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಪ್ರವಾಹದ ನೀರಿನ ಬಣ್ಣ ಬದಲಾಗಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಅದೆಷ್ಟೋ ಸಾರಿ ಪ್ರವಾಹಗಳು ಉಂಟಾದಾಗ ನೀರಿನ ಬಣ್ಣ ನೇರಳೆ ಮತ್ತು ಹಸಿರು ಬಣ್ಣಗಳಿಗೂ ತಿರುಗಿತ್ತು. ಕಾರ್ಖಾನೆಗಳಿಂದ ಕಲುಷಿತ ನೀರನ್ನು ನೇರವಾಗಿ ನದಿಗೆ ಬಿಡುವ ಪರಿಣಾಮದಿಂದಲೂ ನೀರಿನ ಬಣ್ಣ ಬದಲಾವಣೆ ಆಗುತ್ತದೆ ಎಂದು ಹೇಳಲಾಗುತ್ತದೆ. ಇದೇ ಕಾರಣದಿಂದ ಇಂಡೋನೇಷ್ಯಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾದರೂ ಕುಡಿಯುವ ನೀರಿಗೆ ಅಭಾವವಿದೆ.