ಮಾಜಿ ಚಾಂಪಿಯನ್ ಗಳಾದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಭಾನುವಾರ ಪರಸ್ಪರ ಎದುರಾಗುತ್ತಿದ್ದು, ಎರಡೂ ತಂಡಗಳು ಐಪಿಎಲ್ 2021ನೇ ಆವೃತ್ತಿಯಲ್ಲಿ ಗೆಲುವಿನ ಆರಂಭ ಪಡೆಯುವ ಗುರಿಯೊಂದಿಗೆ ಕಣಕ್ಕಿಳಿಯಲಿವೆ.
ಕಳೆದ ಬಾರಿ ಟೂರ್ನಿಯ ಮಧ್ಯಭಾಗದಲ್ಲಿ ಕೆಕೆಆರ್ ತಂಡದ ನಾಯಕತ್ವವನ್ನು ದಿನೇಶ್ ಕಾರ್ತಿಕ್ ಅವರಿಂದ ಇಯಾನ್ ಮಾರ್ಗನ್ ಪಡೆದರು. ಆದರೆ ತಂಡ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಇದೀಗ ಮಾರ್ಗನ್ ನೇತೃತ್ವದಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಕೆಆರ್ ಅಖಾಡಕ್ಕಿಳಿಯುತ್ತಿದೆ.
ಮತ್ತೊಂದೆಡೆ ರನ್ ಸರಾಸರಿ ಆಧಾರದ ಮೇಲೆ ಸನ್ ರೈಸರ್ಸ್ ಹೈದರಾಬಾದ್ ಪ್ಲೇಆಫ್ ಪ್ರವೇಶಿಸಿದ್ದರೂ ಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಡೇವಿಡ್ ವಾರ್ನರ್ ನೇತೃತ್ವದ ತಂಡ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಕೇನ್ ವಿಲಿಯಮ್ಸನ್ ಮತ್ತು ಮನೀಷ್ ಪಾಂಡೆ, ಜಾನಿ ಬೇರ್ ಸ್ಟೊ, ಜೇಸನ್ ರಾಯ್, ರಶೀದ್ ಖಾನ್, ಭುವನೇಶ್ವರ್ ಕುಮಾರ್ ಮುಂತಾದವರು ತಂಡದ ಆಧಾರ ಸ್ತಂಭಗಳಿದ್ದಾರೆ.